Thursday, November 21, 2024
Google search engine
Homeತಾಜಾ ಸುದ್ದಿHMT ಕಾರ್ಖಾನೆ ಪುನಶ್ಚೇತನಕ್ಕೆ ಪ್ರಯತ್ನ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ

HMT ಕಾರ್ಖಾನೆ ಪುನಶ್ಚೇತನಕ್ಕೆ ಪ್ರಯತ್ನ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ

ಮೈಸೂರು ಅರಸರು ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದ ಸ್ಥಾಪನೆಯಾದ ಹೆಚ್ ಎಂಟಿ ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲ ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್ ಎಂಟಿ ಕಾರ್ಖಾನೆಯ ಟೂಲ್ಸ್ ಮತ್ತು ಮಶೀನ್ ವಿಭಾಗಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ದೆಹಲಿಯ ಸಚಿವಾಲಯದ ಕಚೇರಿಯಲ್ಲಿ ಈ ಕಾರ್ಖಾನೆಯ ಪುನರುದ್ಧಾರದ ಬಗ್ಗೆ ಅನೇಕ ಸಭೆಗಳು ಆಗಿವೆ. ಎಲ್ಲಾ ಸಾಧಕ ಭಾದಕಗಳ ಬಗ್ಗೆ ಸಮಾಲೋಚನೆ ನಡೆದಿದೆ ಎಂದರು.

ಎಚ್ ಎಂಟಿ ಕಾರ್ಖಾನೆ ಉಳಿಸುವ ವಿಚಾರದಲ್ಲಿ ನಾನು ರಾಜಿ ಆಗಲ್ಲ, ಅದಕ್ಕೆ ಅಗತ್ಯ ಸಲಹೆ ಪಡೆಯಲು ಒಂದು ಸಲಹಾ ಸಂಸ್ಥೆಯನ್ನು ನೇಮಿಸುವ ಚಿಂತನೆ ಮಾಡಲಾಗಿದೆ. ನೀತಿ ಆಯೋಗದ ಜತೆಯೂ ಸಮಾಲೋಚನೆ ನಡೆಸುತ್ತಿದ್ದೇನೆ. ಒಳ್ಳೆಯ ದಿನ ಬರಬಹುದು. ಆಶವಾದಿಗಳಾಗಿ ಇರಿ ಎಂದು ಅವರು ಹೇಳಿದರು.

ಮೂರು ನಾಲ್ಕು ತಿಂಗಳು ಅವಕಾಶ ಕೊಡಿ. ಎಲ್ಲಾ ಹಂತಗಳಲ್ಲಿಯೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಪ್ರಯತ್ನಗಳು ಯಶಸ್ವಿ ಆಗಬಹುದು. ಪ್ರಧಾನ ಮಂತ್ರಿಗಳು ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಸ್ಪಷ್ಟ ದೂರದೃಷ್ಟಿ ಹೊಂದಿದ್ದಾರೆ. ದಯಮಾಡಿ ಕಾಯಿರಿ ಎಂದು ಅವರು ಹೇಳಿದರು.

ಭಾವುಕರಾದ ಸಚಿವರು:

ಸಚಿವರಿಗೆ ಮನವಿ ಸಲ್ಲಿಸಿದ ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್ ಅವರು; ಈ ಕಾರ್ಖಾನೆಯನ್ನು ನಾವು ತಾಯಿಯಂತೆ ಭಾವಿಸುತ್ತಿದ್ದೇವೆ. ನಮ್ಮ ತಾಯಿ ಈಗ ಕಾಯಿಲೆಪೀಡಿತ ಆಗಿದ್ದಾಳೆ. ದಯಮಾಡಿ ಉಳಿಸಿಕೊಡಿ ಎಂದು ಮನವಿ ಮಾಡಿದಾಗ ಸಚಿವರು ಭಾವೋದ್ವೇಗಕ್ಕೆ ಒಳಗಾದರು.

ನಾನು ರಾಜಕೀಯ ಬಂದಿದ್ದೇ ಆಕಸ್ಮಿಕ. ಎಂದೂ ಬರಬೇಕು ಎಂದು ಭಾವಿಸಿದವನಲ್ಲ, ನಾನು ಮೊದಲ ಬಾರಿಗೆ ಸಂಸದ ಆಗಿದ್ದು ಆಕಸ್ಮಿಕ, ಎರಡು ಬಾರಿ ಸಿಎಂ ಆಗಿದ್ದು ಆಕಸ್ಮಿಕ. ಕೇಂದ್ರ ಸಚಿವನಾಗಿರುವುದು ಕೂಡ ಆಕಸ್ಮಿಕ. ನರೇಂದ್ರ ಮೋದಿ ಅವರು ನನಗೆ ಈ ಅವಕಾಶ ನೀಡಿದ್ದಾರೆ. ಜನರ ಸೇವೆ ಮಾಡುವ ಅವಕಾಶ ಕೊಡುವುದಕ್ಕೆ ಇಷ್ಟೆಲ್ಲಾ ಆಕಸ್ಮಿಕಗಳು ನಡೆದಿವೆ. ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದು ಸಚಿವರು ಹೇಳಿದರು.

ಕಾರ್ಖಾನೆಯ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಪ್ರಧಾನ ವ್ಯವಸ್ಥಾಪಕ ಜತಿನ್ ಪ್ರಸಾದ್, ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್ ಅವರು ವೇದಿಕೆಯ ಮೇಲಿದ್ದರು.

ಕಾರ್ಖಾನೆಗೆ ಭೇಟಿ ನೀಡಿದ ಸಚಿವರು ಗಿಡ ನೆಟ್ಟು ನೀರೆದರು. ಈ ಸಂದರ್ಭದಲ್ಲಿ ಕಾರ್ಮಿಕರು ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments