ಆರಂಭಿಕ ಅಭಿಷೇಕ್ ಶರ್ಮ ಸಿಡಿಸಿದ ಅರ್ಧಶತಕದ ನೆರವಿನಿಂದ ಭಾರತ ತಂಡ 7 ವಿಕೆಟ್ ಗಳಿಂದ ಯುನೈಟೆಡ್ ಅರಬ್ ಎಮಿರೆಟ್ಸ್ ತಂಡವನ್ನು ಸೋಲಿಸಿ ಎಮರ್ಜಿಂಗ್ ಟೀಮ್ಸ್ ಏಷ್ಯಾಕಪ್ ಟಿ-20 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ.
ಓಮನ್ ನ ಅಮೆರತ್ ಮೈದಾನದಲ್ಲಿ ಸೋಮವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ ತಂಡ 16.5 ಓವರ್ ಗಳಲ್ಲಿ 107 ರನ್ ಗೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಭಾರತ ತಂಡ 10.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಭಾರತ ತಂಡ ಆರಂಭದಲ್ಲೇ ಪ್ರಭಾಸಿಮ್ರಾನ್ (8) ವಿಕೆಟ್ ಕಳೆದುಕೊಂಡರೂ ಅಭಿಷೇಕ್ ಶರ್ಮಾ ಮತ್ತು ನಾಯಕ ತಿಲಕ್ ವರ್ಮಾ ಎರಡನೇ ವಿಕೆಟ್ ಗೆ 72 ರನ್ ಪೇರಿಸಿ ತಂಡವನ್ನು ಮುನ್ನಡೆಸಿದರು. ಅಭಿಷೇಕ್ 24 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 58 ರನ್ ಬಾರಿಸಿದರೆ, ತಿಲಕ್ ವರ್ಮಾ 21 ರನ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಯುಎಇ ನಾಟಕೀಯ ಕುಸಿತ ಅನುಭವಿಸಿದರೂ ರಾಹುಲ್ ಚೋಪ್ರಾ 50 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 50 ರನ್ ಬಾರಿಸಿ ತಂಡವನ್ನು ಆಧರಿಸಿದರು. ನಾಯಕ ಬಸೀಲ್ ಹಮೀದ್ 22 ರನ್ ಗಳಿಸಿದರು. ಭಾರತದ ಪರ ರಸೀಖ್ ಸಲಮ್ 3 ವಿಕೆಟ್ ಪಡೆದು ಮಿಂಚಿದರು.