ಭಾರತ ತಂಡ ಟಿ-20 ವಿಶ್ವಕಪ್ 2ನೇ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಪಂದ್ಯಕ್ಕೆ ಮಳೆ ಭೀತಿ ಇರುವ ಕಾರಣ ಮೀಸಲು ದಿನ ನಿಗದಿಪಡಿಸಲಾಗಿದೆ.
ಆಸ್ಟ್ರೇಲಿಯಾ ತಂಡವನ್ನು 24 ರನ್ ಗಳಿಂದ ಸೋಲಿಸಿದ ಭಾರತ ಸೂಪರ್-8 ಗುಂಪು-1ರ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತ್ತು.
ಜೂನ್ 27 ಗುರುವಾರ ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10.30 ಗಂಟೆಗೆ ಪಂದ್ಯ ನಡೆಯಲಿದ್ದು, ಮಳೆ ಭೀತಿ ಕಾರಣ ಹೆಚ್ಚುವರಿ 250 ನಿಮಿಷ ಕಾಲವಕಾಶ ನೀಡಲಾಗಿದೆ. ಒಂದು ವೇಳೆ ಪಂದ್ಯ ನಡೆಸಲು ಅಸಾಧ್ಯವಾದರೆ ಮೀಸಲು ದಿನವಾದ ಮಾರನೇ ದಿನ ಪಂದ್ಯ ನಡೆಯಲಿದೆ.
ಒಂದು ವೇಳೆ ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆಯಾದರೆ ಫೈನಲ್ ಪಂದ್ಯಕ್ಕೆ ಸಿದ್ಧತೆ ನಡೆಯಲು ಕೇವಲ 1 ದಿನ ಮಾತ್ರ ದೊರೆಯಲಿದೆ. ಅಲ್ಲದೇ ಆಟಗಾರರಿಗೂ ವಿಶ್ರಾಂತಿ ಕೊರತೆ ಉಂಟಾಗುವ ಸಾಧ್ಯತೆ ಇದೆ.
ಈಗಾಗಲೇ ರೋಹಿತ್ ಶರ್ಮ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಕುಲದೀಪ್ ಯಾದವ್ ವೆಸ್ಟ್ ಇಂಡೀಸ್ ಪಿಚ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ವಿಶ್ವಾಸವಿತ್ತು. ಅದರೆಂತೆ ಅವರು ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ.
ಭಾರತ ತಂಡಕ್ಕೆ ಆತಂಕ ಇರುವುದು ರನ್ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿ ಬಗ್ಗೆ. ವಿರಾಟ್ ಕೊಹ್ಲಿ ಇಡೀ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ಶೂನ್ಯಕ್ಕೆ ಔಟಾಗಿದ್ದು ಆಘಾತ ನೀಡಿದೆ.