‘ನಾನುಮ್ ರೌಡಿಂದಾ’ ಚಿತ್ರದ ತುಣಕನ್ನು ಅನುಮತಿ ಇಲ್ಲದೇ ಬಳಸಿದ್ದಕ್ಕಾಗಿ ನಟಿ ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ನಟ ಧನುಷ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ನೆಟ್ ಫ್ಲಿಕ್ಸ್ ನಲ್ಲಿ ಬಳಸಲಾದ ಸಾಕ್ಷ್ಯಚಿತ್ರದಲ್ಲಿ ಕಾನೂನುಬಾಹಿರವಾಗಿ ದೃಶ್ಯಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಒಡೆತನದ ರೌಡಿ ಪಿಚ್ಚರ್ ಪ್ರವೇಟ್ ಲಿಮಿಟೆಡ್ ಹಾಗೂ ಇತರೆ ಇಬ್ಬರ ವಿರುದ್ಧ ನಟ ಧನುಷ್ ಒಡೆತನದ ವಂಡರ್ ಬಾರ್ ಫಿಲ್ಮ್ಸ್ ಪ್ರವೇಟ್ ಲಿಮಿಟೆಡ್ ಸಂಸ್ಥೆ ಮೊಕದ್ದಮೆ ದಾಖಲಿಸಿದೆ.
ಧನುಷ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನವೆಂಬರ್ ೨೭ರಂದು ನ್ಯಾಯಮೂರ್ತಿ ಅಬ್ದುಲ್ ಕ್ವಿದೋಷ್ ನೇತೃತ್ವದ ಮದ್ರಾಸ್ ಹೈಕೋರ್ಟ್ ಪೀಠ ಅಂಗೀಕರಿಸಿದ್ದು, ವಿವರಣೆ ನೀಡುವಂತೆ ನಯನತಾರಾ ಮತ್ತು ವಿಘ್ನೇಶ್ ದಂಪತಿಗೆ ನೋಟಿಸ್ ಜಾರಿ ಮಾಡಿದೆ.
ನವೆಂಬರ್ ೧೮ರಂದು ನಯನತಾರಾ ಹುಟ್ಟುಹಬ್ಬದ ದಿನದಂದು ನೆಟ್ ಫ್ಲಿಕ್ಸ್ ನಲ್ಲಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗಿತ್ತು. ‘ನಾನುಮ್ ರೌಡಿಂದಾ’ ದೃಶ್ಯಗಳ ಬಳಕೆಗೆ ಅನುಮತಿ ನೀಡದೇ ಇದ್ದರೂ ಬಳಸಿದ್ದರಿಂದ ೧೦ ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಧನುಷ್ ಎಚ್ಚರಿಸಿದ್ದರು. ಇದರಿಂದ ಕೆರಳಿದ ನಯನತಾರಾ ಮತ್ತು ವಿಘ್ನೇಶ್ ಸಾಮಾಜಿಕ ಜಾಲತಾಣದಲ್ಲಿ ಧನುಷ್ ವಿರುದ್ಧ ಕಿಡಿಕಾರಿದ್ದರು.