ನಿರ್ದೇಶಕ ಮಣಿರತ್ನಂ ಮತ್ತು ನಟ ಕಮಲ್ ಹಾಸನ್ ಮೂರು ದಶಕದ ನಂತರ ಜೊತೆಯಾಗಿ ಥಗ್ ಆಫ್ ಲೈಫ್ ಚಿತ್ರ ಕರ್ನಾಟಕದಲ್ಲಿ ಬಹಿಷ್ಕಾರದ ಭೀತಿಗೆ ಸಿಲುಕಿದೆ.
ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂಬ ಕಮಲ್ ಹಾಸನ್ ಅವರ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಸಚಿವ ಶಿವರಾಜ್ ತಂಗಡಗಿ ಅಲ್ಲದ ಕನ್ನಡ ಪರ ಸಂಘಟನೆಗಳ ಮುಖಂಡರಾದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, ನಾರಾಯಣ ಗೌಡ ಸೇರಿದಂತೆ ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಕನ್ನಡ ವಾಣಿಜ್ಯ ಮಂಡಳಿ ಮುಖಂಡರನ್ನು ಭೇಟಿ ಮಾಡಿ ಕಮಲ್ ಹಾಸನ್ ನಟಿಸಿದ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ. ಈ ಮೂಲಕ ಬಹು ನಿರೀಕ್ಷಿತ ಥಗ್ ಆಫ್ ಲೈಫ್ ಚಿತ್ರಕ್ಕೆ ಕರ್ನಾಟಕದಲ್ಲಿ ಬಹಿಷ್ಕಾರದ ಭೀತಿ ಎದುರಾಗಿದೆ.
ಅಹಿಂಸಾ ಚೇತನ್ ಹೊರತುಪಡಿಸಿ ಕನ್ನಡ ಚಿತ್ರರಂಗದ ಯಾವೊಬ್ಬ ನಟ-ನಟಿಯರು ಕಮಲ್ ಹಾಸನ್ ಹೇಳಿಕೆ ಖಂಡಿಸದೇ ಇರುವುದು ಕನ್ನಡ ಪರ ಸಂಘಟನೆಗಳನ್ನು ಕೆರಳಿಸಿದೆ. ಅದರಲ್ಲೂ ಥ್ ಆಫ್ ಲೈಫ್ ಚಿತ್ರದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಹೇಳಿಕೆ ನೀಡುವಾಗ ಸಮಾರಂಭದಲ್ಲಿ ಉಪಸ್ಥಿತರಿದ್ದ ಶಿವರಾಜ್ ಕುಮಾರ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಮಲ್ ಹಾಸನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಮುಖ್ಯಮಂತ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಕಮಲ್ ಹಾಸನ್ ಗೆ ಬುದ್ದಿಭ್ರಮಣೆ ಆದಂತೆ ಇದೆ. ಕನ್ನಡಕ್ಕೆ ಸಾಕಷ್ಟು ಹಿನ್ನೆಲೆ ಇದ್ದು, ಇದರ ಬಗ್ಗೆ ಇತಿಹಾಸ ತಿಳಿದುಕೊಂಡಿಲ್ಲ. ಇತಿಹಾಸ ಗೊತ್ತಿಲ್ಲದೇ ಈ ರೀತಿ ಹೇಳಿಕೆ ನೀಡಬಾರದು ಎಂದು ಖಂಡಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಮಲ್ ಹಾಸನ್ ಅರ್ಬನ್ ನಕ್ಸಲ್ ಇದ್ದಂತೆ. ಅವರ ಮಾತಿಗೂ ನಡೆಗೂ ಸಂಬಂಧವೇ ಇಲ್ಲ. ಕನ್ನಡ ಇತಿಹಾಸ ಗೊತ್ತಿಲ್ಲದೇ ಬಾಯಿಗೆ ಬಂದಂತೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.


