ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ 50ನೇ ವರ್ಷ ಆಚರಿಸುತ್ತಿರುವ 74 ವರ್ಷದ ರಜನಿಕಾಂತ್ ನಟಿಸಿದ ಕೂಲಿ ಚಿತ್ರ ಬಿಡುಗಡೆ ಆದ ಮೂರೇ ದಿನದಲ್ಲಿ 300 ಕೋಟಿ ರೂ. ಬಾಚಿಕೊಂಡು ಹೊಸ ದಾಖಲೆ ಬರೆದಿದೆ.
ಸ್ಟಾರ್ ನಟರ ದಂಡೇ ಹೊಂದಿರುವ ಕೂಲಿ ಚಿತ್ರ ಸರಣಿ ರಜೆಗಳ ಹಿನ್ನೆಲೆಯಲ್ಲಿ ಆಗಸ್ಟ್ 14ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಿದ್ದು, ಮೊದಲೆರಡು ದಿನ ಭರ್ಜರಿ ಆರಂಭ ಪಡೆದಿದ್ದ ಕೂಲಿ ಚಿತ್ರ ಮೂರನೇ ದಿನಕ್ಕೆ ಗಳಿಕೆಯಲ್ಲಿ ಅಲ್ಪ ಕುಸಿತ ಕಂಡಿದ್ದರೂ 300 ಕೋಟಿ ರೂ. ಗಡಿ ದಾಟಿದೆ. ಈ ಮೂಲಕ ಈ ವರ್ಷದ ಅತೀ ದೊಡ್ಡ ಓಪನಿಂಗ್ ಪಡೆದ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೊದಲ ದಿನವೇ ೬೫ ಕೋಟಿಗಿಂತ ಹೆಚ್ಚು ಗಳಿಸಿದ್ದ ಕೂಲಿ ಚಿತ್ರ ರಜನಿಕಾಂತ್ ಚಿತ್ರ ಜೀವನದಲ್ಲಿ ಅತೀ ದೊಡ್ಡ ಆರಂಭ ಪಡೆದ ಚಿತ್ರ ಎಂಬ ದಾಖಲೆ ಬರೆದಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಮೀರ್ ಖಾನ್, ನಾಗಾರ್ಜುನ್, ಉಪೇಂದ್ರ ಮುಂತಾದ ಸ್ಟಾರ್ ನಟರ ದಂಡು ಚಿತ್ರವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ.
ಆಮೀರ್ ಖಾನ್ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಹಿಂದಿಯಲ್ಲೂ ಉತ್ತಮ ಗಳಿಕೆಗೆ ಕಾರಣವಾಗಿದೆ. ಅಲ್ಲದೇ ವಾರ್-೨ ಚಿತ್ರದ ಪ್ರಬಲ ಪೈಪೋಟಿ ನಡುವೆ ಕೂಲಿ ಓಪನಿಂಗ್ ಪಡೆದು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದೆ.
ಇತೀಚೆಗೆ ರಜನಿಕಾಂತ್ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣದ ಕಾರಣ ವಿಜಯ್ ಅಥವಾ ಅಜಿತ್ ನಂ.1 ಪಟ್ಟ ಅಲಂಕರಿಸಬಹುದು ಎಂದು ಹೇಳಲಾಗಿತ್ತು. ಆದರೆ ವಿಜಯ್ ಸಿನಿಮಾ ತೊರೆದು ರಾಜಕೀಯ ಪ್ರವೇಶಿಸಿದರೆ, ರಜನಿಕಾಂತ್ ೭೪ನೇ ಇಳಿವಯಸ್ಸಿನಲ್ಲಿಯೂ ಹೀರೊ ಆಗಿ ನಂ.೧ ಪಟ್ಟ ಮುಂದುರಿಸಿಕೊಂಡು ಹೋಗಿದ್ದಾರೆ.


