ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಭಾನುವಾರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಮೈಸೂರಿನಲ್ಲಿ ವಸ್ತು ಪ್ರದರ್ಶನದಲ್ಲಿ ಹಾಕಲಾಗಿದ್ದ ಅದ್ಧೂರಿ ಸೆಟ್ ನಲ್ಲಿ ಭಾನುವಾರ ಬೆಳಿಗ್ಗೆ 8:30ರಿಂದ 10 ಗಂಟೆ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಿತು.
ಗೋಲ್ಡ್ ಕಲರ್ ಸೀರೆಯಲ್ಲಿ ಧನ್ಯತಾ ಮತ್ತು ಗೋಲ್ಡ್ ಕಲರ್ ಶೇರ್ವಾನಿಯಲ್ಲಿ ಧನಂಜಯ್ ಮಿಂಚಿದರು. ಧನ್ಯತಾ ಕುಟುಂಬದಿಂದ ಧಾರೆ ಶಾಸ್ತ್ರದ ಬಳಿಕ ಮಾಂಗಲ್ಯ ಧಾರಣೆ ನಡೆಯಿತು. ಡಾಲಿ ಮದುವೆಗೆ ಕುಟುಂಬಸ್ಥರು, ಮಠಾಧೀಶರು ಹಾಗೂ ಆಪ್ತರು ಸಾಕ್ಷಿಯಾದರು. ಜೋಡಿಗೆ ಅಕ್ಷತೆ ಹಾಕಿ ಹರಸಿದರು.
ಡಾಲಿ ಮದುವೆಯಲ್ಲಿ ನಟ ಶಿವರಾಜ್ಕುಮಾರ್, ನಟಿ ರಮ್ಯಾ ವಸಿಷ್ಠ ಸಿಂಹ, ಯುವರಾಜ್ ಕುಮಾರ್, ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ, ವಿನಯ್ ರಾಜ್, ಬಿಗ್ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಸೇರಿದಂತೆ ಅನೇಕ ಸಿನಿಮಾ ತಾರೆಯರು ಪಾಲ್ಗೊಂಡು ಜೋಡಿಗೆ ವಿಶ್ ಮಾಡಿದರು.
ಧನಂಜಯ್ ಮತ್ತು ಧನ್ಯತಾ ಜೋಡಿ ಮದುವೆಗೆ ಆಗಮಿಸಿರುವ ಅತಿಥಿಗಳಿಗಾಗಿ 25 ಕ್ಕೂ ಹೆಚ್ಚು ಬಗೆ ಬಗೆಯ ವಿಶೇಷ ಖಾದ್ಯಗಳನ್ನು ಸಿದ್ಧತೆ ಮಾಡಲಾಗಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕುಟುಂಬಸ್ಥರು, ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 800 ಬಾಣಸಿಗರಿಂದ ಅಡುಗೆ ತಯಾರಿಯಾಗಿದೆ.


