ಉತ್ತರ ಕರ್ನಾಟಕದ ಖ್ಯಾತ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.
ಅನಾರೋಗ್ಯದ ಕಾರಣ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ ಸೋಮವಾರ ಸಂಜೆ ವಿಧಿವಶರಾಗಿದ್ದಾರೆ.
ರಾಜು ತಾಳಿಕೋಟೆ ಅವರ ಪೂರ್ಣ ಹೆಸರು ರಾಜೇಸಾಬ ಮುಕ್ತುಮಸಾಬ್ ಆಗಿದ್ದು, ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಚಿಕ್ಕಸಿಂದಗಿಯ ತಾಳಿಕೋಟೆಯಲ್ಲಿ ವಾಸವಾಗಿದ್ದರು.
ಖಾಸ್ಗತೇಶ್ವರ ನಾಟಕ ಮಂಡಳಿ ಮಾಲೀಕರಾಗಿದ್ದ ರಾಜು ತಾಳಿಕೋಟೆ ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯ ಮುಂತಾದ ನಾಟಕಗಳಿಂದ ಜನಪ್ರಿಯರಾಗಿದ್ದರು.
ಶೈನ್ ಶೆಟ್ಟಿ ಅಭಿಯನದ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ವೇಳೆ ರಾಜು ತಾಳಿಕೋಟೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಂಜೆ 5.30ರ ಸುಮಾರಿಗೆ ನಿಧನರಾಗಿದ್ದಾರೆ.


