ದರ್ಶನ್ ಇದ್ದಾಗ ಬೆಂಗಳೂರಿನಲ್ಲಿ ಇದ್ದಾರೋ ಇಲ್ಲವೋ ಎಂಬುದೇ ಗೊತ್ತಾಗುತ್ತಿರಲಿಲ್ಲ. ಈಗ ದರ್ಶನ್ ಇಲ್ಲ ಅಂತ ಏನೇನೋ ಮಾತನಾಡುತ್ತಿದ್ದಾರೆ. ಇದರಿಂದ ದರ್ಶನ್ ಅಭಿಮಾನಿಗಳು ಕೋಪಗೊಳ್ಳುವುದು ಬೇಡ ಎಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಪರೋಕ್ಷವಾಗಿ ನಟ ಕಿಚ್ಚ ಸುದೀಪ್ ಅವರಿಗೆ ಟಾಂಗ್ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರಮೋಷನ್ ವೇಳೆ ನಮ್ಮ ವಿರುದ್ಧ ಯುದ್ಧಕ್ಕೆ ದೊಡ್ಡ ಪಡೆಯೇ ಸಿದ್ಧವಾಗಿದೆ. ಇದಕ್ಕೆಲ್ಲಾ ಉತ್ತರ ಕೊಡಲು ಸಜ್ಜಾಗಿ ಎಂದು ಸುದೀಪ್ ಅಭಿಮಾನಿಗಳಿಗೆ ಕರೆ ನೀಡಿದ ಬಗ್ಗೆ ದಾವಣಗೆರೆಯಲ್ಲಿ ಭಾನುವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಜಯಲಕ್ಷ್ಮೀ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ದರ್ಶನ್ ಇದ್ದಾಗ ಇವರೆಲ್ಲ ಎಲ್ಲಿದ್ದಾರೋ ಎಂಬುದೇ ಗೊತ್ತಿರಲಿಲ್ಲ. ಈಗ ದರ್ಶನ್ ಇಲ್ಲ ವೇದಿಕೆ ಮೇಲೆ ಚಾನೆಲ್ ಗಳಲ್ಲಿ ಅಂತ ಏನೇನೋ ಮಾತನಾಡುತ್ತಿದ್ದಾರೆ. ಅದರ ಬಗ್ಗೆ ದರ್ಶನ್ ಅಭಿಮಾನಿಗಳು ತಲೆಕೆಡಿಸಿಕೊಳ್ಳುವುದು ಬೇಡ. ಕೋಪಗೊಳ್ಳುವುದು ಬೇಡ ಎಂದು ಅವರು ಹೇಳಿದರು.
ದರ್ಶನ್ ಎಲ್ಲಾ ಕನ್ನಡ ಚಿತ್ರಗಳನ್ನು ನೋಡಿ ಅಂತಲೇ ಹೇಳುತ್ತಿದ್ದರು. ದರ್ಶನ್ ಹೊರಗೆ ಇದ್ದಾಗ ಏನು ಮಾಡಿದ್ದಾರೆ. ಅವರ ಬಗ್ಗೆ ನಾವು ಚೆನ್ನಾಗಿ ತಿಳಿದುಕೊಂಡಿದ್ದೇವೆ. ಇವುಗಳಿಗೆ ಪ್ರತಿಕ್ರಿಯೆ ನೀಡುವುದು ಬೇಡ ಎಂದು ವಿಜಯಲಕ್ಷ್ಮೀ ಹೇಳಿದರು.
ಯುದ್ಧಕ್ಕೆ ದೊಡ್ಡ ಪಡೆ ಸಿದ್ಧವಾಗಿದೆ: ಕಿಚ್ಚ ಸುದೀಪ್
ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿರುವ ಮಾರ್ಕ್ ಚಿತ್ರದ ವಿರುದ್ಧ ಯುದ್ಧಕ್ಕೆ ದೊಡ್ಡ ಪಡೆಯೇ ಸಿದ್ಧವಾಗಿದೆ. ನಾವು ಯುದ್ಧಕ್ಕೆ ಸಿದ್ಧವಾಗಿದ್ದೇವೆ ಎಂದು ನಟ ಕಿಚ್ಚ ಸುದೀಪ್ ಹೇಳಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಮಾರ್ಕ್ ಚಿತ್ರದ ಬಿಡುಗಡೆಯ ಪ್ರಮೋಷನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಿಂತು ಮಾತನಾಡಿದರೆ ಯಾರಿಗೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತದೆ ಎಂಬ ಕಾರಣಕ್ಕೆ ಇಲ್ಲಿ ಹೇಳುತ್ತಿದ್ದೇನೆ ಎಂದಿದ್ದಾರೆ.
ಜುಲೈನಲ್ಲಿ ನಾವು ಡಿಸೆಂಬರ್ ನಲ್ಲಿ ಸಿನಿಮಾ ಮೂಲಕ ಬಾಗಿಲು ತಟ್ಟಲಿದ್ದೇವೆ ಎಂದು ಹೇಳಿದ್ದೇವೆ. ಅದರಂತೆ ಡಿಸೆಂಬರ್ ೨೫ರಂದು ಮಾರ್ಕ್ ಚಿತ್ರದ ಮೂಲಕ ಬಾಗಿಲು ತಟ್ಟುತ್ತಿದ್ದೇವೆ. ಇದರ ವಿರುದ್ಧ ಹೊರಗೆ ಯುದ್ಧಕ್ಕೆ ದೊಡ್ಡ ಪಡೆ ಸಿದ್ಧವಾಗಿದೆ ಎಂದರು.
ಒಳ್ಳೆಯವರಾಗಿ ಇರಬೇಕು ಎಂಬ ಕಾರಣಕ್ಕೆ ನಾನು ಬಾಯಿ ಸೇರಿದಂತೆ ಎಲ್ಲವನ್ನೂ ಮುಚ್ಚಿಕೊಂಡು ಇದ್ದೆ. ಇದರಿಂದ ನನ್ನ ಅಭಿಮಾನಿಗಳು ಸಾಕಷ್ಟು ನೋವು ಅನುಭವಿಸಬೇಕಾಯಿತು. ಆದರೆ ಈಗ ಹೇಳುತ್ತಿದ್ದೇನೆ. ನಾವು ಯುದ್ಧಕ್ಕೆ ಸಿದ್ಧ. ಮಾತಿಗೆ ಬದ್ಧ. ಎಷ್ಟು ಸಹನೆಯಿಂದ ಇರಬೇಕೋ ಇರಿ. ಮಾತನಾಡುವ ಜಾಗದಲ್ಲಿ ಮಾತನಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದರು.


