ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋಗಳನ್ನು ಪೆನ್ಡ್ರೈವ್ ಮೂಲಕ ಹಂಚಿದ್ದು ಯಾರು ಎಂಬುದು ಗೊತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಹಂಚಿದ್ದು ಯಾರು ಎಂಬುದು ಅಧಿಕಾರಿಗಳಿಗೆ ಗೊತ್ತಿದೆ. ಪ್ರಕರಣವು ತನಿಖೆಯ ಹಂತದಲ್ಲಿದೆ. ಹೀಗಾಗಿ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಟ್ಟು ಕೊಡಲು ಆಗುವುದಿಲ್ಲ ಎಂದರು.
ಎಸ್ಐಟಿ ತನಿಖೆಯು ಚುರುಕಾಗಿ ನಡೆಯುತ್ತಿದ್ದು, ತನಿಖೆ ಪೂರ್ಣವಾದ ಬಳಿಕ ಎಲ್ಲವೂ ಸಾರ್ವಜನಿಕವಾಗಿ ಗೊತ್ತಾಗಲಿದೆ. ಹೆಸರು ಬಹಿರಂಗಪಡಿಸಿದರೆ ತನಿಖೆಗೆ ತೊಂದರೆ ಆಗಬಹುದು ಎಂದು ಅವರು ಹೇಳಿದರು.
ಎಸ್ ಐಟಿ ಇತ್ತೀಚೆಗೆ ದಾಖಲಿಸಿಕೊಂಡ ಹೊಸ ಪ್ರಕರಣದಲ್ಲಿ ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಹೆಸರು ಉಲ್ಲೇಖಿಸಲಾಗಿದೆ. ಅಲ್ಲದೇ ಅವರ ಕಚೇರಿಯ ಆಪ್ತನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಕುರಿತಾದ ಅತ್ಯಾಚಾರ, ಅಶ್ಲೀಲ ವಿಡಿಯೋ ಚಿತ್ರೀಕರಣ ಆರೋಪದ ಈ ಪ್ರಕರಣವು ಹೊರ ಬೀಳುತ್ತಿದ್ದಂತೆ, ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ತನಿಖೆಯ ಬಿಸಿ ಹೆಚ್ಚಾದಂತೆ ಒಂದು ತಿಂಗಳ ಬಳಿಕ ತಾನಾಗಿಯೇ ಎಸ್ಐಟಿಗೆ ಬಂದು ಶರಣಾಗುವುದಾಗಿ ವಿಡಿಯೋ ಮೂಲಕ ಹೇಳಿಕೆ ನೀಡಿದ್ದು ಗೊತ್ತೇ ಇದೆ.