ಶಿಸ್ತಿನ ದಾಳಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಮಿಂಚಿನ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ ಗಳಿಂದ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಸುಲಭ ಜಯ ದಾಖಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಆಸೆಯನ್ನು ಜೀವಂತವಾಗಿಸಿಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವನ್ನು 147 ರನ್ ಗಳಿಗೆ ಆಲೌಟ್ ಮಾಡಿದ ಆರ್ ಸಿಬಿ ತಂಡ 13.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್ ಗೆ 35 ಎಸೆತಗಳಲ್ಲಿ 92 ರನ್ ಜೊತೆಯಾಟದಿಂದ ತಂಡದ ಗೆಲುವು ಖಚಿತಪಡಿಸಿದರು. ಫಾಫ್ ಡು ಪ್ಲೆಸಿಸ್ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಆರ್ ಸಿಬಿ ಪರ ಅತ್ಯಂತ ವೇಗದ 2ನೇ ಅರ್ಧಶತಕ ಗಳಿಸಿದ ಗೌರವಕ್ಕೆ ಪಾತ್ರರಾದರು.
ಫಾಫ್ ಡು ಪ್ಲೆಸಿಸ್ 23 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 64 ರನ್ ಸಿಡಿಸಿ ಔಟಾದರೆ, ಕೊಹ್ಲಿ 27 ಎಸೆತಗಳಲ್ಲಿ 2 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 42 ರನ್ ಗಳಿಸಿದರು.
ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 92 ರನ್ ಗಳಿಸಿದ್ದ ಆರ್ ಸಿಬಿ ಗುಜರಾತ್ ಟೈಟಾನ್ಸ್ ಬೌಲರ್ ಗಳು ನೀಡಿದ ತಿರುಗೇಟಿನಿಂದ 25 ರನ್ ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡು ನಾಟಕೀಯ ಕುಸಿತ ಅನುಭವಿಸಿತು. ಈ ಹಂತದಲ್ಲಿ ಅಜೇಯ 21 ರನ್ ಗಳಿಸಿದ ದಿನೇಶ್ ಕಾರ್ತಿಕ್ ಮತ್ತು 15 ರನ್ ಬಾರಿಸಿದ ಸ್ವಪ್ನಿಲ್ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಗೆಲುವಿನೊಂದಿಗೆ ಆರ್ ಸಿಬಿ 11 ಪಂದ್ಯಗಳಿಂದ 4 ಗೆಲುವು ಹಾಗೂ 7 ಸೋಲಿನೊಂದಿಗೆ 8 ಅಂಕ ಹಾಗೂ ರನ್ ಸರಾಸರಿಯಲ್ಲಿ ಉತ್ತಮ ಸಾಧನೆಯೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಜಿಗಿಯಿತು. ಗುಜರಾತ್ ಟೈಟಾನ್ಸ್ 11 ಪಂದ್ಯಗಳಿಂದ 4 ಗೆಲುವು ಹಾಗೂ 7 ಸೋಲಿನೊಂದಿಗೆ 9ನೇ ಸ್ಥಾನಕ್ಕೆ ಕುಸಿದರೆ, ಮುಂಬೈ ಇಂಡಿಯನ್ಸ್ ಕೊನೆಯ ಸ್ಥಾನಕ್ಕೆ ಜಾರಿತು.