ನನ್ನನ್ನು ಮೂರು ತಿಂಗಳು ಮನೆಯಿಂದ ಹೊರಗೆ ಬಾರದಂತೆ ಮಾಡಿದ್ದರು. ಈಗ ಹೊರಗೆ ಬಂದಿದ್ದೀನಿ. ಇವತ್ತಿನಿಂದ ನನ್ನ ಹೋರಾಟ ಶುರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗುಡುಗಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಗೆ ಶನಿವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ನನ್ನ ಮಲಗಿಸಿಬಿಟ್ಟಿದ್ದರು. ಇನ್ನು ಮುಂದೆ ನಾನು ಮನೆಯಲ್ಲಿ ಮಲಗುವುದಿಲ್ಲ. ನನ್ನ ಹೋರಾಟ ಆರಂಭಿಸುತ್ತೇನೆ. ನಾನು ಏನು ಅಂತ ತೋರಿಸುತ್ತೇನೆ ಎಂದರು.
ಮೂರು ತಿಂಗಳಿಂದ ನಾನು ಹೊರಗೆ ಬಾರದಂತೆ ಮಾಡಿದ್ದರು. ಶಾಸಕನಾಗಿ, ವಿರೋಧ ಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ 62 ವರ್ಷ ರಾಜಕೀಯ ಜೀವನದಲ್ಲಿ ಇರುವ ನಾನು ಅಂತಹ ಮಹಾಪರಾಧ ಏನು ಮಾಡಿದ್ದೇನೆ ಎಂದು ಅವರು ಪ್ರಶ್ನಿಸಿದರು.
ನಾನು ಈಗ ಮನೆಯಿಂದ ಹೊರಗೆ ಬಂದಿದ್ದೇನೆ. ಜೆಡಿಎಸ್ ಕಚೇರಿಗೆ ಮೊದಲ ಬಾರಿ ಭೇಟಿ ಕೊಡುತ್ತಿದ್ದೇನೆ. ಕುಮಾರಣ್ಣ ಕೂಡ ಬಂದು ಹೋಗ್ತೇನೆ ಎಂದು ಹೇಳಿದ್ದಾರೆ. ಅವರಿಗೆ ಪ್ರತಿದಿನ ಕಚೇರಿಗೆ ಭೇಟಿ ನೀಡಲು ಆಗಲ್ಲ. ನಿಖಿಲ್ ಕುಮಾರಸ್ವಾಮಿಗೆ ಜವಾಬ್ದಾರಿ ನೀಡಲಾಗಿದೆ ಎಂದು ದೇವೇಗೌಡ ವಿವರಿಸಿದರು.
ನಾನು ಮೂರು ತಿಂಗಳು ಹೊರಗೆ ಬಾರದಂತೆ ಯಾರು ಮಾಡಿದರು. ನಮ್ಮ ವಿರುದ್ಧ ಷಡ್ಯಂತ್ರ ಯಾರು ಮಾಡಿದರು ಎಂಬುದೆಲ್ಲಾ ಗೊತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಮತ್ತು ಮೈಸೂರಿನಲ್ಲಿ ನಾವು ಮೋದಿ ಜೊತೆ ಸೇರಿ ಬಿಜೆಪಿ ಹೇಗೆ ಗೆಲ್ಲಿಸಿದೆವು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.