ರಾತ್ರಿ ಮಟನ್ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಮಲಗಿದಲ್ಲಿಯೇ ಚಿರನಿದ್ರೆಗೆ ಜಾರಿದ ಆಘಾತಕಾರಿ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ದಂಪತಿ ಹಾಗೂ ಇಬ್ಬರು ಮಕ್ಕಳಾದ ಭೀಮಣ್ಣ (60), ಈರಮ್ಮ (57), ಮಲ್ಲೇಶ್ (21), ಪಾರ್ವತಿ (19) ಮೃತ ದುರ್ದೈವಿಗಳು.
ಘಟನೆಯಲ್ಲಿ ಭೀಮಣ್ಣ ಅವರ ಮತ್ತೊಬ್ಬ ಪುತ್ರಿ ಮಲ್ಲಮ್ಮ (18) ತೀವ್ರ ಅಸ್ವಸ್ಥಗೊಂಡಿದ್ದು, ಆರೋಗ್ಯದ ಸ್ಥಿತಿ ಗಂಭೀರವಾಗಿರುವ ಕಾರಣ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭೀಮಣ್ಣ ತಂದಿದ್ದ ಮಟನ್ ನಲ್ಲಿ ಅಡುಗೆ ಮಾಡಿ ಕುಟುಂಬಸ್ಥರು ಗುರುವಾರ ರಾತ್ರಿ ಮಲಗಿದ್ದಾರೆ. ಆದರೆ ಮಲಗಿದವರು ನಿದ್ರೆಯಲ್ಲೇ ಮೃತಪಟ್ಟಿದ್ದಾರೆ. ಅಡುಗೆಯಲ್ಲಿ ಹಲ್ಲಿ ಬಿದ್ದ ಕಾರಣ ವಿಷವಾದ ಆಹಾರ ಸೇವಿಸಿ ಮೃತಪಟ್ಟಿದ್ದಾರೋ ಅಥವಾ ಆರ್ಥಿಕ ಸಂಕಷ್ಟದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬುದು ತಿಳಿದು ಬಂದಿಲ್ಲ.
ನಾಲ್ವರ ಸಾವಿನ ಕುರಿತು ತನಿಖೆ ಬಳಿಕವೇ ಅಸಲಿ ಸತ್ಯ ಹೊರಬರಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಟನ್ ಸಾರನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಭೀಮಣ್ಣ, ಈರಮ್ಮ, ಮಲ್ಲೇಶ್ ಹಾಗೂ ಪಾರ್ವತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯಿಂದ ಕಲ್ಲೂರು ಗ್ರಾಮದ ಜನರು ಆಘಾತಗೊಂಡಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.