ಆಧುನಿಕ ಶೈಲಿಯ ಉಡುಪು ಧರಿಸುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಕ್ಕೆ ಪಾಕಿಸ್ತಾನದ ವ್ಯಕ್ತಿ ತಾಯಿ, ತಂಗಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಹೆತ್ತ ತಾಯಿ, ತಂಗಿ ಹಾಗೂ ಸಂಬಂಧಿಕರನ್ನು ಕತ್ತು ಸೀಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಿಲಾಲ್ ಅಹ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿಚಾರಣೆ ವೇಳೆ ಕುಟುಂಬದ ಮಹಿಳೆಯರು ಒಳ್ಳೆಯ ಉಡುಪುಗಳನ್ನು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದರಿಂದ ಮದುವೆ ಸಂಬಂಧ ಮುರಿದುಬಿದ್ದಿತ್ತು. ಅಲ್ಲದೇ ನನ್ನನ್ನು ಪದೇಪದೇ ರೇಗಿಸುತ್ತಿದ್ದರು ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾಗಿ ಬಿಲಾಲ್ ಹೇಳಿದ್ದಾನೆ.
ಕರಾಚಿಯ ಹಳೆಯ ಸೋಲ್ಜರ್ ಬಜಾರ್ ನಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಮಹಿಳೆಯರ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಿಲಾಲ್ ಮಾನಸಿಕ ಅಸ್ವಸ್ಥನಾಗಿದ್ದು, ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರು ಆಧುನಿಕ ಶೈಲಿಯ ಉಡುಪು ಧರಿಸಿ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು. ಪತ್ನಿ ಕೂಡ ಇವರ ಜೊತೆ ಸೇರಿಕೊಂಡಿದ್ದರಿಂದ ಬಿಲಾಲ್ ಪದೇಪದೇ ಜಗಳ ಮಾಡುತ್ತಿದ್ದ. ನೀನೊಬ್ಬ ಮೂಲಭೂತವಾದಿ ಎಂದು ಹಿಯಾಳಿಸಿದ ಪತ್ನಿ ಗಂಡನನ್ನು ತೊರೆದಿದ್ದಳು. ಇದರಿಂದ ಬಿಲಾಲ್ ಕುಟುಂಬದ ಇತರೆ ಸದಸ್ಯರ ಮೇಲೆ ಮತ್ತಷ್ಟು ಸಿಟ್ಟುಗೊಂಡಿದ್ದ ಎಂದು ತಿಳಿದು ಬಂದಿದೆ.