ಭಾರತದ ಅತ್ಯಂತ ಯಶಸ್ವಿ ಹಾಗೂ ಶ್ರೀಮಂತ ಉದ್ಯಮಿ ಆಗಿರುವ ಗೌತಮ್ ಅದಾನಿ 70ನೇ ವಯಸ್ಸಿಗೆ ಉದ್ಯಮಕ್ಕೆ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದಾರೆ.
ಬ್ಲೂಮ್ ಬರ್ಗ್ ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಗೌತಮ್ ಅದಾನಿ 70ನೇ ವಯಸ್ಸಿಗೆ ಉದ್ಯಮಿಯಾಗಿ ನಿವೃತ್ತಿ ಹೊಂದಲು 10 ವರ್ಷಗಳ ಹಿಂದೆಯೇ ನಿರ್ಧರಿಸಿದ್ದೆ. ಈ ಹಿನ್ನೆಲೆಯಲ್ಲಿ 213 ದಶಕೋಟಿ ಡಾಲರ್ ಮೌಲ್ಯದ ಉದ್ಯಮವನ್ನು ಎರಡನೇ ತಲೆಮಾರಿಗೆ ಅಧಿಕಾರ ಹಸ್ತಾಂತರಿಸಲು ಯೋಜನೆ ರೂಪಿಸಿದ್ದೇನೆ ಎಂದು ತಿಳಿಸಿದರು.
ಗೌತಮ್ ಅದಾನಿ ತಮ್ಮ ಮಕ್ಕಳಾದ ಕರಣ್ (37) ಮತ್ತು ಜೀತ್ (26), ಸೋದರ ಮಕ್ಕಳಾದ ಪ್ರಣವ್ (45) ಮತ್ತು ಸಾಗರ್ (30) ಅವರಿಗೆ ಫ್ಯಾಮಿಲಿ ಟ್ರಸ್ಟ್ ನಲ್ಲಿ ಹಂತ ಹಂತವಾಗಿ ಷೇರುಗಳನ್ನು ಹಂಚಿಕೆ ಮಾಡಲಾಗಿದ್ದು, ಎಲ್ಲರೂ ಸಾಮಾನ ಹಕ್ಕುದಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಎರಡನೇ ತಲೆಮಾರಿನ ಎಲ್ಲಾ ಮಕ್ಕಳಲ್ಲೂ ಯಶಸ್ಸು ಸಾಧಿಸುವ ಹುಮ್ಮಸ್ಸು, ಇದು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವುದಿಲ್ಲ. ಈ ವಿಷಯದಲ್ಲಿ ನಾನು ಸಂತೋಷವಾಗಿದ್ದೇನೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಈಗಾಗಲೇ ಜವಾಬ್ದಾರಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕರಣ್ ಸೀಮೆಂಟ್, ಬಂದರು ಮತ್ತು ಲಾಜಿಸ್ಟಿಕ್ ವಿಭಾಗದ ವಿದೇಶೀ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾನೆ. ಜೀತ್ ಅದಾನಿ ಖಾಸಗಿ ಒಡೆತನದ ವಿಮಾನ ನಿಲ್ದಾಣ ನಿರ್ವಹಣೆ, ಶಸ್ತ್ರಾಸ್ತ್ರ ಮಾರಾಟ, ಡಿಜಿಟಲ್ ಉದ್ಯಮಗಳ ಜವಾಬ್ದಾರಿ ವಹಿಸಲಾಗಿದೆ. ಪ್ರಣವ್ 1999ರಲ್ಲಿ ಉದ್ಯಮಕ್ಕೆ ಸೇರ್ಪಡೆಯಾಗಿದ್ದು, ಕೃಷಿ ಮತ್ತು ತೈಲ ಘಟಕಗಳ ಮೇಲೆ ಗಮನ ಹರಿಸಿದ್ದಾನೆ. ಸಾಗರ್ ಪವರ್ ಮತ್ತು ಹಣಕಾಸು ವಿಭಾಗವನ್ನು ನೋಡಿಕೊಳ್ಳುತ್ತಿದ್ದಾನೆ ಎಂದು ಅದಾನಿ ವಿವರಿಸಿದರು.