ಎರಡು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ. ನಾನು ಎಂದೂ ಯಾರಿಗೂ ದ್ರೋಹ ಮಾಡಿಲ್ಲ. ಈ ಬಾರಿ ನನ್ನ ಬದುಕು ಇರೋದು ನಿಮ್ಮ ಋಣ ತೀರಿಸೋಕೆ. ನಿಮ್ಮ ಮನೆ ಮಗ ನಾನು, ನಿಮ್ಮ ಮಗನಿಗೆ ಹಾಲಾದರೂ ಕೊಡಿ, ವಿಷವಾದರೂ ಕೊಡಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭಾವುಕ ಭಾಷಣ ಮಾಡಿದ್ದಾರೆ.
ಚನ್ನಪಟ್ಟಣದ ಕೋಡಂಬಳ್ಳಿ, ಇಗ್ಗಲೂರು ಗ್ರಾಮಗಳಲ್ಲಿ ಭಾನುವಾರ ನಡೆದ ಜಿಲ್ಲಾ ಪಂಚಾಯಿತಿ ಹಾಗೂ ಕಾರ್ಯಕರ್ತರು ಮತ್ತು ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಜಾತಿ, ಪಕ್ಷ ನೋಡದೇ ನಾನು ಕೆಲಸ ಮಾಡಿದ್ದೇನೆ. ನೀವು ಬೆಳಿಸಿದ ನಿಮ್ಮ ಮನೆ ಮಗ ನಾನು. ನೀವು ಬೆಳೆಸಿದ ನಿಮ್ಮ ಮಗನಿಗೆ ಹಾಲಾದರೂ ಕೊಡಿ, ವಿಷವಾದರೂ ಕೊಡಿ. ನಾನು ಒಳ್ಳೆಯ ಕೆಲಸ ಮಾಡಿದ್ದರೆ ಜನಪರ ಯೋಜನೆ ತಂದಿದದ್ದರೆ ಬೆಂಬಲ ನೀಡಿ. ಎನ್‌ಡಿಎ ಅಭ್ಯರ್ಥಿಯನ್ನ ಗೆಲ್ಲಿಸಿಕೊಡಿ ಎಂದು ಅವರು ಮನವಿ ಮಾಡಿದರು.
ಅಭ್ಯರ್ಥಿ ಹೆಸರು ಘೋಷಣೆ ಮಾಡುವಂತೆ ಕಾರ್ಯಕರ್ತರ ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈಗಾಗಲೇ ಈ ಬಗ್ಗೆ ಸಭೆ ಮಾಡಿ ಚರ್ಚೆ ಮಾಡಿದ್ದೀವಿ, ಇನ್ನೊಂದು ವಾರದಲ್ಲಿ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.
ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆ ಕರೆದಿದ್ದೇನೆ. ಜಿಪಂ ವ್ಯಾಪ್ತಿಯ 5 ಭಾಗದಲ್ಲಿ ಸಭೆ ಮಾಡ್ತಿದ್ದೇನೆ. 10ನೇ ತಾರೀಖು ಮತ್ತೆ ಚನ್ನಪಟ್ಟಣದಲ್ಲಿ ಸಭೆ ಮಾಡುತ್ತಿದ್ದೇನೆ. ಜನಾಭಿಪ್ರಾಯ ಪಡೆಯಲು ಸಭೆ ಮಾಡುತ್ತಿದ್ದೇವೆ. ಇಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಲು ಸಲಹೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅವರು ಹೇಳಿದರು.