ಈರುಳ್ಳಿ ಮತ್ತು ಬಾಸ್ಮತಿ ಅಕ್ಕಿ ರಫ್ತು ಮೇಲೆ ನಿಗದಿಪಡಿಸಿದ್ದ ಕನಿಷ್ಠ ದರ ಮಿತಿ ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಇದೇ ವೇಳೆ ರಫ್ತು ಸುಂಕವನ್ನು ಶೇ.20ರಷ್ಟು ಕಡಿತಗೊಳಿಸಿದೆ.
ರೈತರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಆದಾಯ ಗಳಿಸುವ ಮೂಲಕ ಲಾಭ ಪಡೆಯುವ ಅವಕಾಶಕ್ಕಾಗಿ ಈ ಹಿಂದೆ ನಿಗದಿಪಡಿಸಲಾಗಿದ್ದ ಕನಿಷ್ಠ ದರ ಮಿತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಈರುಳ್ಳಿ ಮತ್ತು ಬಾಸ್ಮತಿ ಅಕ್ಕಿ ರಫ್ತು ಮಿತಿ ಮೇಲೆ ಹೇರಲಾಗಿದ್ದ ಶೇ.40ರಷ್ಟು ಸುಂಕವನ್ನು ಶೇ.20ಕ್ಕೆ ಕಡಿತಗೊಳಿಸಲಾಗಿದ್ದು, ಸೆಪ್ಟೆಂಬರ್ 14ರಿಂದ ಈ ಆದೇಶ ಜಾರಿಗೆ ಬರಲಿದೆ. ಮೇ 4ರಿಂದ ರಫ್ತು ಮೇಲಿನ ಸುಂಕವನ್ನು ಶೇ.40ಕ್ಕೆ ಏರಿಸಲಾಗಿತ್ತು.
ಕೇಂದ್ರ ಸರ್ಕಾರ ಈ ಹಿಂದೆ ರಫ್ತು ಮಾಡುವ ಈರುಳ್ಳಿ ಮೇಲೆ ಕನಿಷ್ಠ ಬೆಲೆ ಮಿತಿಯನ್ನು ಪ್ರತಿ ಟನ್ ಗೆ 550 ಡಾಲರ್ ನಿಗದಿಪಡಿಸಿತ್ತು. ಬಾಸ್ಮತಿ ಅಕ್ಕಿ ಪ್ರತಿ ಟನ್ ಮೇಲೆ 950 ಡಾಲರ್ ಕನಿಷ್ಠ ಬೆಲೆ ದರ ನಿಗದಿ ಮಾಡಲಾಗಿತ್ತು. ಇದರಿಂದ ರೈತರು ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ಈರುಳ್ಳಿಯನ್ನು ರಫ್ತು ಮಾಡುವಂತಿರಲಿಲ್ಲ.
2023ರಲ್ಲಿ ಅಕ್ರಮ ಅಕ್ಕಿ ಸಾಗಾಟಕ್ಕೆ ತಡೆ ಹಾಕಲು ಕೇಂದ್ರ ಸರ್ಕಾರ ಬಾಸ್ಮತಿ ಅಕ್ಕಿ ರಫ್ತು ಮೇಲೆ ಪ್ರತಿ ಟನ್ ಗೆ ಕನಿಷ್ಠ ಬೆಲೆ ಮಿತಿಯನ್ನು 1200 ಡಾಲರ್ ಗೆ ನಿಗದಿಪಡಿಸಿತ್ತು. 2023-24ನೇ ಸಾಲಿನಲ್ಲಿ 5.9 ಬಿಲಿಯನ್ ಡಾಲರ್ ಮೊತ್ತದಷ್ಟು ಬಾಸ್ಮತಿ ಅಕ್ಕಿ ರಫ್ತು ಆಗಿತ್ತು.
ಶುಕ್ರವಾರ ಹೊರಡಿಸಲಾದ ಅಧಿಸೂಚನೆಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಂಇಪಿಯನ್ನು ತೆಗೆದುಹಾಕಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.