ಕಳೆದೆರಡು ವಾರದಿಂದ ಕಾವೇರಿ ಜಲನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳು ಭರ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಾಗಿ ನಾಲೆಗಳಿಗೆ ಕೆಆರ್ ಎಸ್ ಜಲಾಶಯದಿಂದ 15 ದಿನಗಳ ಕಾಲ ವಿಸಿ ನಾಲೆಗೆ ನೀರು ಹರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೆಆರ್ ಎಸ್ ಡ್ಯಾಂನಲ್ಲಿ 100 ಅಡಿ ನೀರು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ರೈತರ ಒತ್ತಾಯದ ಮೇರೆಗೆ ನಾಳೆಯಿಂದ 15 ದಿನಗಳ ಕಾಲ ವಿಸಿ ನಾಲೆಗೆ ನೀರು ಬಿಡಲು ಮಂಡ್ಯ ಜಿಲ್ಲಾಡಳಿತ ತೀರ್ಮಾನ ಮಾಡಿದೆ.
ಸಾಮಾನ್ಯವಾಗಿ ಮಾರ್ಚ್ ನಲ್ಲಿ ಮೊದಲ ಬಾರಿ ವಿಸಿ ನಾಲೆಗೆ ನೀರು ಬಿಡಲಾಗುತ್ತದೆ. ಆದರೆ ಕಳೆದ ಬಾರಿ ಮಳೆ ಕೊರತೆ ಉಂಟಾಗಿದ್ದರಿಂದ ನೀರಿನ ಸಮಸ್ಯೆ ಆಗಿತ್ತು. ನಂತರ ಎರಡನೇ ಹಂತದಲ್ಲಿ ಜುಲೈ ಎರಡನೇ ವಾರ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಜುಲೈ ಮೊದಲ ವಾರದಲ್ಲಿಯೇ ವಿಸಿ ನಾಲೆಗಳಿಗೆ ನೀರು ಬಿಡಲು ತೀರ್ಮಾನಿಸಲಾಗಿದೆ.
ಕೇವಲ ಕೆರೆ ಕಟ್ಟೆ ತುಂಬಿಸಲು ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ನಾಲೆಗೆ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಮುಂದಿನ 15 ದಿನಗಳ ನಂತರ ಮುಂಗಾರು ಮಳೆಯ ಪರಿಸ್ಥಿತಿ ಹಾಗೂ ಕೆಆರ್‌ಎಸ್ ಅಣೆಕಟ್ಟಿನ ಒಳಹರಿವು ಗಮನಿಸಿಕೊಂಡು ರೈತರ ಬೆಳೆಗಳಿಗೂ ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲಾಡಳಿತ ತಿಳಿಸಿದೆ.