ಸರ್ಕಾರಿ ನೌಕರರ ಬಹು ಬೇಡಿಕೆಯ 7ನೇ ವೇತನ ಆಯೋಗ ಶಿಫಾರಸ್ಸಿನಂತೆ ಶೇ.27.5ರಷ್ಟು ವೇತನ ಏರಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವ 7ನೇ ವೇತನ ಆಯೋಗದ ಶಿಫಾರಸ್ಸನ್ನು ಆಗಸ್ಟ್ 1ರಿಂದ ಜಾರಿಗೆ ತರಲು ತೀರ್ಮಾನಿಸಲಾಯಿತು.
ಸೋಮವಾರ ವಿಧಾನಮಂಡಲ ಅಧಿವೇಶನ ಮುಗಿದ ನಂತರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ.
ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗ ಸರ್ಕಾರಿ ನೌಕರರ ವೇತನವನ್ನು ಶೇ.27.5ರಷ್ಟು ಏರಿಕೆ ಮಾಡಲು ಶಿಫಾರಸು ಮಾಡಿತ್ತು.
7ನೇ ವೇತನ ಆಯೋಗ ಜಾರಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ 17,440.15 ಕೋಟಿ ರೂ. ವಾರ್ಷಿಕ ಹೊರೆ ಬೀಳಲಿದೆ.
2023ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 7ನೇ ವೇತನ ಆಯೋಗದ ಶಿಫಾರಸ್ಸು ಪೂರ್ಣವಾಗಿ ಜಾರಿಗೊಳಿಸದೇ ಸರ್ಕಾರಿ ನೌಕರರಿಗೆ ಮಧ್ಯಂತರ ಶೇ.17.5 ರಷ್ಟು ವೇತನ ಪರಿಷ್ಕರಣೆ ಮಾಡಿತ್ತು. ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೇ.10.5ರಷ್ಟು ವೇತನ ಪರಿಷ್ಕರಣೆ ಮಾಡಿದರೆ ಸಾಕು.