ದಸರಾ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, 2 ತಿಂಗಳ ಬಾಕಿಯನ್ನು ಅಕ್ಟೋಬರ್ 7 ಮತ್ತು 9ರಂದು ಪಾವತಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಳಗಾವಿಯ ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ನವರಾತ್ರಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೃಹಲಕ್ಷ್ಮೀ ಹಣವನ್ನು ಮುಂದಿನ ವಾರ ಹಾಕಲಾಗುವುದು. ಎಲ್ಲರ ಒಳ್ಳೆಯ ಅಡುಗೆ ಮಾಡಿ ಚೆನ್ನಾಗಿ ಹಬ್ಬ ಆಚರಿಸಿ ಎಂದರು.
ತಾಂತ್ರಿಕ ಕಾರಣದಿಂದ 2 ತಿಂಗಳು ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಮಾಡಲು ಆಗಿರಲಿಲ್ಲ. ಇದೀಗ ನಾಲ್ಕೈದು ದಿನಗಳಲ್ಲಿ ಅಂದರೆ ಅಕ್ಟೋಬರ್ 7 ಮತ್ತು 9ರಂದು ಹಣ ಪಾವತಿ ಮಾಡಲಾಗುವುದು ಎಂದು ಅವರು ಹೇಳಿದರು.
ನವರಾತ್ರಿ ಹಬ್ಬದ ವೇಳೆ ಎರಡು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆಲ್ಲ ಬರುತ್ತಿದ್ದು, ಹಣ ಸಿಕ್ಕ ಬಳಿಕ ಭರ್ಜರಿಯಾಗಿ ಹೋಳಿಗೆ ಊಟ ಮಾಡಿ, ದಸರಾ ಹಬ್ಬ ಆಚರಿಸಿ. ಅದೇ ನನಗೆ ಸಂತೋಷ ಎಂದು ಸಚಿವೆ ಹೇಳುತ್ತಿದ್ದಂತೆ ಸಭೆಯಲ್ಲಿ ಸೇರಿದ್ದ ಮಹಿಳೆಯರಿಂದ ಕರತಾಡನ ಕೇಳಿಬಂತು.
ಜುಲೈ ಮತ್ತು ಆಗಸ್ಟ್ ತಿಂಗಳ ಹಣವನ್ನು ತಾಂತ್ರಿಕ ಕಾರಣಗಳಿಂದ ಬ್ಯಾಂಕ್ ಖಾತೆಗೆ ಹಾಕಲು ಆಗಿರಲಿಲ್ಲ. ಹಠ ಹಿಡಿದು ಈ ಯೋಜನೆ ಜಾರಿಗೆ ತಂದಿರುವುದರಿಂದ ಜನರಿಗೆ ಹಣ ಪಾವತಿ ಮಾಡಲಾಗುವುದು ಎಂದು ಅವರು ಹೇಳಿದರು.