Friday, November 22, 2024
Google search engine
Homeತಾಜಾ ಸುದ್ದಿಗ್ರಾಮಸಭೆ ನಡೆಸಲು ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ!

ಗ್ರಾಮಸಭೆ ನಡೆಸಲು ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ!

ಗ್ರಾಮ ಪಂಚಾಯತಿಗಳು ಜನವಸತಿ ಸಭೆ, ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳನ್ನು ನಡೆಸುವುದು ಕಡ್ಡಾಯವಾಗಿದ್ದು ಈ ಸಂಬಂಧದಲ್ಲಿ ಕಾರ್ಯಾಚರಣೆ ವಿಧಾನದ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಅನುಷ್ಠಾನ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗಾಗಿ ಗ್ರಾಮ ಪಂಚಾಯತಿಗಳು ಸಭೆಗಳನ್ನು ನಡೆಸುವುದು ಕಡ್ಡಾಯವಾಗಿದ್ದು, ಗ್ರಾಮಸಭೆ ಸೇರುವ ಒಂದು ತಿಂಗಳು ಮೊದಲೇ ಜನವಸತಿ ಸಭೆ ಹಾಗೂ ವಾರ್ಡ್ ಸಭೆಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರು ನಡೆಸಬೇಕು, ಒಂದು ವರ್ಷದಲ್ಲಿ ಎರಡು ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು ಎಂಬ ಮಾಹಿತಿ  ಮಾರ್ಗಸೂಚಿಗಳಲ್ಲಿದೆ.

ಪ್ರತಿ ಆರ್ಥಿಕ ವರ್ಷದಲ್ಲಿ ಜನವರಿ ಮಾಹೆಯ 26, ಏಪ್ರಿಲ್ ಮಾಹೆಯ 24, ಆಗಸ್ಟ್ ಮಾಹೆಯ 15 ಮತ್ತು ಅಕ್ಟೋಬರ್ ಮಾಹೆಯ 2ರಂದು ಕಡ್ಡಾಯವಾಗಿ  ಗ್ರಾಮ ಸಭೆಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಒಂದು ವರ್ಷದಲ್ಲಿ ಒಂದು ವಿಶೇಷ ಮಹಿಳಾ ಗ್ರಾಮಸಭೆ ಮತ್ತು ಒಂದು ಮಕ್ಕಳ ಗ್ರಾಮಸಭೆಯನ್ನು ಆಯೋಜಿಸಲು ಮಾರ್ಗದರ್ಶನ ನೀಡಲಾಗಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಸಭೆಗಳನ್ನು ಕರೆಯುವ ವಿಧಾನ, ಸಭೆಗಳಲ್ಲಿ ಪಾಲ್ಗೊಳ್ಳ ಬೇಕಾದ ಇಲಾಖಾ ಅಧಿಕಾರಿಗಳು-ನೌಕರರ ವಿವರಗಳನ್ನು ಈ ಮಾರ್ಗಸೂಚಿ ಹೊಂದಿದೆ, ಗ್ರಾಮ ಪಂಚಾಯತಿ ಪ್ರದೇಶದಲ್ಲಿ ಜವಾಬ್ದಾರಿ ನಕ್ಷೆಯನುಸಾರ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಆದ್ಯತೆಯ ನಿರ್ಧಾರ, ಪಡಿತರ ವಿತರಣೆ, ವೃದ್ದಾಪ್ಯ ವೇತನ, ವಿಶೇಷ ಚೇತನರ ವೇತನ, ವಿಧವಾ ವೇತನ ಹಾಗೂ ಇನ್ನಿತರೆ ಸಾಮಾಜಿಕ  ಭದ್ರತಾ ಯೋಜನೆಗಳ ವಿವರ ಸಂಗ್ರಹ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ತಂದ ಬಗ್ಗೆ ಚರ್ಚೆ, ಆಸ್ಪತ್ರೆ ಹಾಗೂ ಪಶುವೈದ್ಯ ಶಾಲೆಗಳ ಚಟುವಟಿಕೆಗಳ ಮಾಹಿತಿ, ಜನರ ಹಾಗೂ ಜಾನುವಾರುಗಳ ಆರೋಗ್ಯದ ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ನೀರು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಲು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯಿಂದ ಗ್ರಾಮಕ್ಕೆ ಮಾಡಿದ ವೆಚ್ಚ ಹಾಗೂ ಕೈಗೊಂಡ ಕ್ರಮ, ಶೌಚಾಲಯಗಳ ನಿರ್ಮಾಣ ಮಾಹಿತಿ, ಸಹಾಯಧನ ನೀಡಿರುವ ವಿವರ, ಅಂಗನವಾಡಿ ಕೇಂದ್ರದ ಚಟುವಟಿಕೆಗಳ ಬಗ್ಗೆ ಚರ್ಚೆ, ಗ್ರಾಮ ಪಂಚಾಯತಿಯ ವಿವಿಧ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಗ್ರಾಮದ ಫಲಾನುಭವಿಗಳ ಆಯ್ಕೆ ಮಾಡಲು ಗ್ರಾಮ ಸಭೆಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಗ್ರಾಮ ಸಭೆಗಳು ಸಹಾಯಕವಾಗಿದ್ದು ಗ್ರಾಮಗಳನ್ನು ಬಲಯುತಗೊಳಿಸಲು ಸಹಾಯಕವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.

ಗ್ರಾಮಸಭೆಗಳನ್ನು ಆಯೋಜಿಸುವ ಸಂಬಂಧ ತಾಲ್ಲೂಕು ಪಂಚಾಯತಿಗಳ ಕಾರ್ಯಾನಿರ್ವಾಹಕ ಅಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನೂ ಸಹ ಈ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ ಎಂದು ತಿಳಿಸಿರುವ ಗ್ರಾಮೀಣಾಭಿವೃದ್ಧಿ ಸಚಿವರು ತಾಲ್ಲೂಕು ಪಂಚಾಯತಿಗಳ ಕಾರ್ಯಾನಿರ್ವಾಹಕ ಅಧಿಕಾರಿಗಳು ತಮ್ಮ ಜವಾಬ್ದಾರಿಯಲ್ಲಿ ಲೋಪವಾಗದಂತೆ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ.

ಗ್ರಾಮಸಭೆಗಳನ್ನು ನಡೆಸುವಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಅತಿ ಮುಖ್ಯವಾಗಿದ್ದು, ಜನವಸತಿ, ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳಲ್ಲಿ ಹೆಚ್ಚು ಮಂದಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಬೇಕು, ಗ್ರಾಮ ಪಂಚಾಯತಿಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯ ನಿರ್ವಹಿಸುವ ಮೂಲಕ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಬಡ ಮತ್ತು ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಚಿವರು ನಿರ್ದೇಶನ ನೀಡಿದ್ದಾರೆ.

ಮುಖ್ಯಾಂಶಗಳು

ಗ್ರಾಮ ಪಂಚಾಯತಿಗಳಲ್ಲಿ ಜನವಸತಿ ಸಭೆ, ವಾರ್ಡ್ ಸಭೆ ಹಾಗೂ ಗ್ರಾಮಸಭೆ ನಡೆಸುವುದು                                      ಕಡ್ಡಾಯ

ಕಾರ್ಯಾಚರಣೆ ವಿಧಾನದ ಮಾರ್ಗಸೂಚಿ ಬಿಡುಗಡೆ

ಜವಾಬ್ದಾರಿ ನಕ್ಷೆಯನುಸಾರ ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳಿಗೆ ಆದ್ಯತೆ

ಗ್ರಾಮಸಭೆಗೂ ಒಂದು ತಿಂಗಳು ಮುನ್ನ ಜನವಸತಿ ಸಭೆ ಹಾಗೂ ವಾರ್ಡ್ ಸಭೆಗಳ ಏರ್ಪಾಟು

ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಗ್ರಾಮ ಸಭೆಗಳು ಸಹಾಯಕ

ತಾಲ್ಲೂಕು ಪಂಚಾಯತಿಯ ಕಾರ್ಯಾನಿರ್ವಾಹಕ ಅಧಿಕಾರಿಗಳಿಗೆ ಗ್ರಾಮ ಸಭೆ ಆಯೋಜಿಸುವ ಜವಾಬ್ದಾರಿ

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ ಮುಖ್ಯ

ಗ್ರಾಮೀಣ ಪ್ರದೇಶದ ಬಡ ಮತ್ತು ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಗಳನ್ನು ತಲುಪಿಸಲು ಪ್ರಿಯಾಂಕ್‌                      ಖರ್ಗೆ ನಿರ್ದೇಶನ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments