ಎನ್ ಡಿಎ ಮೈತ್ರಿಕೂಟದಲ್ಲಿ ಮೊದಲ ಬಾರಿ ಗುರುತಿಸಿಕೊಂಡ ಜೆಡಿಎಸ್ ಮೊದಲ ಪ್ರಯತ್ನದಲ್ಲೇ ಪ್ರಧಾನಿ ಮೋದಿ ನೇತೃತ್ವದ ನೂತನ ಸರ್ಕಾರದಲ್ಲಿ ಪ್ರಮುಖ ಖಾತೆ ಪಡೆದುಕೊಂಡಿದೆ.
ಎಚ್.ಡಿ. ಕುಮಾರಸ್ವಾಮಿ ಕೃಷಿ ಖಾತೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ನೂತನ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಗಳನ್ನು ಪಡೆದಿದ್ದಾರೆ.
ಕೃಷಿ ಖಾತೆ ಪಡೆದರೆ ದೇಶಾದ್ಯಂತ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ರಾಷ್ಟ್ರಮಟ್ಟದ ನಾಯಕರಾಗಬಹುದು. ಈ ಮೂಲಕ ಜೆಡಿಎಸ್ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಲು ಅನುಕೂಲವಾಗಬಹುದು ಎಂದು ಎಚ್.ಡಿ.ಕುಮಾರಸ್ವಾಮಿ ಬಯಸಿದ್ದರು. ಆದರೆ ಕೈಗಾರಿಕೆ ಮತ್ತು ಉಕ್ಕು ಖಾತೆ ಲಭಿಸಿರುವುದು ಅಚ್ಚರಿ ಮೂಡಿಸಿದೆ.
ಕೈಗಾರಿಕೆ ಮತ್ತು ಉಕ್ಕು ಖಾತೆ ಪ್ರಮುಖ ಖಾತೆ ಆಗಿದ್ದರೂ ಸಾರ್ವಜನಿಕರ ಸಂರ್ಪಕವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಕರ್ನಾಟಕದಲ್ಲೂ ಪ್ರಭಾವ ಬೀರುವ ಅವಕಾಶ ಕಡಿಮೆ ಆಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಎಚ್.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವ ಸಂಪುಟ ಸೇರ್ಪಡೆ ಮೂಲಕ ಜೆಡಿಎಸ್ ಕೇಂದ್ರದಲ್ಲಿ 25 ವರ್ಷಗಳ ನಂತರ ಸ್ಥಾನ ಪಡೆದಂತಾಗಿದೆ. ಎಚ್.ಡಿ. ದೇವೇಗೌಡರು ಪ್ರಧಾನಿ ಆದ ನಂತರ ಜೆಡಿಎಸ್ ಕೇಂದ್ರದಲ್ಲಿ ಸ್ಥಾನ ಗಳಿಸಲು ವಿಫಲವಾಗಿತ್ತು.