ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ. ನನ್ನ ಅಭ್ಯಂತರವೇನೂ ಇಲ್ಲ ಎಂದು ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಮಾಜಿ ಸಚಿವ ಎಚ್.ಡಿ. ರೇವಣ್ಣ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ವಾಲ್ಮೀಕಿ ಹಗರಣದ ಬಗ್ಗೆ ಮಾತನಾಡುತ್ತಿದ್ದ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಲ್ಮೀಕಿ ಹಗರಣವನ್ನು ಎಸ್ ಐಟಿ ಪೊಲೀಸರು ಮಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯನ್ನೂ ಮಾಡುತ್ತಿದೆ. ಆದರೆ ತನಿಖೆ ಯಾವ ಹಂತಕ್ಕೆ ಬಂದಿದೆ ಎಂಬ ಮಾಹಿತಿ ನೀಡಿ ಎಂದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಸದಸ್ಯರು ಎದ್ದು ನಿಂತು ವಾಲ್ಮೀಕಿ ಹಗರಣದ ತನಿಖೆ ನಡೆಯುತ್ತಿದೆ. ಹಣ ಹೋಗಿದ್ದರೆ ವಾಪಸ್ ತರಬಹುದು. ಆದರೆ ಮಾನ ಹೋಗಿದ್ದರೆ ವಾಪಸ್ ಬರಲು ಸಾಧ್ಯವೇ? ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಇಡೀ ಕರ್ನಾಟಕದ ಮಾನ ಹರಾಜಾಗಿದೆ ಎಂದು ಗುಡುಗಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಎಚ್.ಡಿ. ರೇವಣ್ಣ, ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ. ನನ್ನ ಅಭ್ಯಂತರವೇನೂ ಇಲ್ಲ. ಆದರೆ ಯಾರೋ ಹೆಣ್ಣು ಮಗಳು ಬಂದು ದೂರು ಕೊಟ್ಟರೆ ಸ್ವತಃ ಜಿಲ್ಲಾಧಿಕಾರಿಯೇ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. 25 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹದ್ದನ್ನು ನೋಡಿಲ್ಲ ಎಂದು ಹೇಳಿದರು.