ನೈಋತ್ಯ ಮುಂಗಾರು ಚುರುಕಾಗಿರುವುದರಿಂದ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಜಲಾಶಯಗಳಿಗೆ ಒಳ ಹರಿವು ಪ್ರಮಾಣ ಹೆಚ್ಚಾಗಿದೆ.
ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಡೆ ಉತ್ತಮ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ ರಾಜ್ಯದಲ್ಲಿ ಇನ್ನೂ ಕೆಲವು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಈ ಬಾರಿ ಜಲಾಶಯಗಳು ಭರ್ತಿಯಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.
ಕೊಡುಗು, ಮಂಡ್ಯ, ಮೈಸೂರು ಮತ್ತು ನೆರೆಯ ಕೇರಳದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮೈಸೂರು ಭಾಗದ ಕಬಿನಿ, ಕೆಆರ್ ಎಸ್, ಹಾರಂಗಿ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡು ಬರುತ್ತಿದೆ.
ಕೆಆರ್ ಎಸ್ ಜಲಾಶಯದ ಗರಿಷ್ಠ ಮಟ್ಟ 124 ಅಡಿಗಳಾಗಿದ್ದು, ಭಾನುವಾರದ ವೇಳೆ 95 ಅಡಿ ನೀರು ಸಂಗ್ರಹವಾಗಿದೆ. ಅಲ್ಲದೇ ಒಳಹರಿವು ಪ್ರಮಾಣ 15 ಸಾವಿರ ಕ್ಯೂಸೆಕ್ಸ್ ನಷ್ಟಿದೆ. ಇದೇ ರೀತಿ ಮಳೆ ಮುಂದುವರಿದರೆ 5 ಅಡಿ ನೀರು ತುಂಬಿದರೆ ಕೆಲವೇ ದಿನಗಳಲ್ಲಿ 100ರ ಗಡಿ ದಾಟಲಿದೆ ಎಂದು ಹೇಳಲಾಗಿದೆ.
ಕಬಿನಿ ಜಲಾಶಯದಲ್ಲಿ ಕೂಡ ಒಳಹರಿವು 9,179 ಕ್ಯೂಸೆಕ್ಸ್ ಇದ್ದು, ಹರಿಹರಿವು 1250 ಕ್ಯೂಸೆಕ್ಸ್ ಆಗಿದೆ. ಇದರಿಂದ ಜಲಾಶಯದಲ್ಲಿ 14.98 ಟಿಎಂಸಿ ನೀರು ಸಂಗ್ರಹವಾಗಿದೆ. ಹಾರಂಗಿ ಜಲಾಶಯದಲ್ಲಿ 8.50 ಟಿಎಂಸಿ ಗರಿಷ್ಠ ನೀರು ಸಂಗ್ರಹ ಮಾಡಬಹುದಾಗಿದ್ದು, ಪ್ರಸ್ತುತ 3.8 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳಹರಿವು 1216 ಕ್ಯೂಸೆಕ್ಸ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯ ಕರ್ನಾಟಕದ ತುಂಗಾ, ಧನುಷ್ಕೋಟಿ ಸೇರಿದಂತೆ ಹಲವು ಜಲಾಶಯಗಳು ಭರ್ತಿಯಾಗಿದ್ದು, ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ ಕೂಡ ಒಳಹರಿವು ಹೆಚ್ಚಾಗಿದ್ದು, ಸಾಕಷ್ಟು ನೀರು ಹರಿದು ಬರುತ್ತಿದೆ.