ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಸಹಚರರ ವಿರುದ್ಧ ಪೊಲೀಸರು ದಾಖಲಿಸಿರುವ ಚಾರ್ಜ್ ಶೀಟ್ ವಿವರಗಳನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ನೇತೃತ್ವದ ಪೀಠ ಮಂಗಳವಾರ ಈ ಆದೇಶ ಹೊರಡಿಸಿದ್ದು, ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ 3991 ಪುಟಗಳ ಚಾರ್ಜ್ ಶೀಟ್ ನಲ್ಲಿರುವ ವಿವರಗಳ ಮೇಲೆ ವರದಿ ಮಾಡದಂತೆ ಸೂಚಿಸಿದೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಮಾಧ್ಯಮ ವರದಿಗೆ ತಡೆ ಕೋರಿ ಕೆಳಗಿನ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ಹಾಗೂ ಎಫ್ ಐಆರ್ ವರದಿ ಆಧರಿಸಿ ದರ್ಶನ್ ಹಾಗೂ ಸಹಚರರ ವಿರುದ್ಧ ಯಾವುದೇ ವಿವರಗಳ ಕುರಿತು ವರದಿ ಮಾಡದಂತೆ ಮಾಧ್ಯಮಗಳಿಗೆ ಹೈಕೋರ್ಟ್ ತಡೆ ನೀಡಿದೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿರುವ ಹೈಕೋರ್ಟ್, ಎಲೆಕ್ಟ್ರಿಕ್, ಪ್ರಿಂಟ್ ಹಾಗೂ ಸಾಮಾಜಿಕ ಮಾಧ್ಯಮಗಳು ಮೊದಲಿನಂತೆ ವರದಿಯನ್ನಷ್ಟೇ ಪ್ರಸ್ತಾಪಿಸುತ್ತಿಲ್ಲ. ಬದಲಾಗಿ ತಮ್ಮ ಅಭಿಪ್ರಾಯದ ಜೊತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿವೆ. ಇದರಿಂದ ತನಿಖೆಯ ದಿಕ್ಕು ಕೂಡ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಮಾಧ್ಯಮಗಳ ವರದಿಗಳು ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಮತ್ತು ಎಫ್ ಐಆರ್ ಕುರಿತು ವರದಿ ಮಾಡದಂತೆ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.