ಶೀತ, ಕೆಮ್ಮು ಯಾವಾಗ ಬರುತ್ತೆ ಅಂತನೇ ಹೇಳೋಕೆ ಆಗಲ್ಲ. ಕೆಲವರಿಗಂತೂ ಸಣ್ಣ ಪುಟ್ಟ ಅಲರ್ಜಿ, ಧೂಳು, ಹವಾಮಾನದಲ್ಲಿ ಬದಲಾವಣೆ ಆದರೂ ಸಾಕು ಥಟ್ ಅಂತ ಈ ಕಾಯಿಲೆ ಅಲ್ಲದ ಕಾಯಿಲೆ ಅಂಟಿಕೊಂಡು ಬಿಡುತ್ತೆ.
ಶೀತ, ಕೆಮ್ಮು ಮಾತ್ರೆ ತಗೊಂಡರೂ ವಾರ ತೆಗೆದುಕೊಳ್ಳಲಿಲ್ಲ ಅಂದರೆ 7 ದಿನ ಎಂಬ ಮಾತಿದೆ. ಆದರೆ ಇದರಿಂದ ಜ್ವರದಿಂದ ತಪ್ಪಿಸಿಕೊಳ್ಳಬಹುದಾದರೂ ಇಡೀ ದಿನ ಮಂಕಾಗಿ ಇರಬೇಕಾಗುತ್ತದೆ. ಯಾವುದರಲ್ಲೂ ಆಸಕ್ತಿಯೇ ಇಲ್ಲದಂತಾಗುತ್ತದೆ.
ಇದನ್ನೆಲ್ಲಾ ತಪ್ಪಿಸಿಕೊಳ್ಳಬೇಕು ಅಂದರೆ ಮನೆಯಲ್ಲೇ ಮಾಡಬಹುದಾದ ಕಷಾಯ ಸೇವಿಸಿ. ಆರೋಗ್ಯವಾಗಿರಿ. ಇದು ನಿಮ್ಮ ಮೈಯನ್ನು ಬೆಚ್ಚಗೆ ಇಡುವುದೂ ಅಲ್ಲದೇ ಉಸಿರಾಟದ ಸಮಸ್ಯೆಗೆ ಕಡಿವಾಣ ಹಾಕಿ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ.
ದಿನಕ್ಕೆ ಕನಿಷ್ಠ ಮೂರು ಬಾರಿ ಕುಡಿದರಂತೂ ಶೀತ, ಕೆಮ್ಮು, ಕಫ, ಜ್ವರ ಓಡಿ ಹೋಗುವುದರಲ್ಲಿ ಸಂದೇಹವೇ ಇಲ್ಲ. ಇಷ್ಟಕ್ಕೂ ಈ ಕಷಾಯ ಮಾಡುವುದು ಹೇಗೆ. ಅದಕ್ಕೆ ಏನೆಲ್ಲಾ ಬೇಕು. ಇಲ್ಲಿದೆ ನೋಡಿ ರೆಸಿಪಿ. ಮನೆಯಲ್ಲಿ ಮಾಡಿ ಆರೋಗ್ಯವಾಗಿ ಇರಿ. ಇದನ್ನು ಷೇರ್ ಮಾಡುವ ಮೂಲಕ ಹೆಚ್ಚಿನ ಜನಕ್ಕೆ ತಿಳಿಸಿಕೊಟ್ಟು ಅವರ ಉತ್ತಮ ಆರೋಗ್ಯ ಬಯಸಿರಿ..
ಬೇಕಾಗುವ ಸಾಮಾಗ್ರಿಗಳು:
1 ಚಮಚ ಕೊತ್ತಂಬರಿ ಬೀಜ
1/2 ಚಮಚ ಜೀರಿಗೆ
1/2 ಚಮಚ ಅರಿಶಿಣ ಪುಡಿ
1 ಚಮಚ ಬೆಲ್ಲ
1 ಚಮಚ ಕಾಳು ಮೆಣಸು
1 ಚಮಚ ತುರಿದ ಶುಂಠಿ
1/2 ಲೋಟ ಹಾಲು
ಮಾಡುವ ವಿಧಾನ:
ಕೊತ್ತಂಬರಿ ಬೀಜ, ಜೀರಿಗೆ, ಕಾಳು ಮೆಣಸು, ಏಲಕ್ಕಿ ಹಾಕಿ ಸ್ವಲ್ಪ ಹುರಿದು ತರಿತರಿಯಾಗಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
ಒಂದು ಚಿಕ್ಕ ಪಾತ್ರೆಗೆ ನೀರು ಹಾಕಿ, 1 ಚಮಚ ಕಷಾಯ ಪುಡಿ, ಅರಿಶಿಣ ಪುಡಿ, ತುರಿದ ಶುಂಠಿ ಹಾಕಿ, ಬೆಲ್ಲ ಹಾಕಿ.
5 ನಿಮಿಷ ಚೆನ್ನಾಗಿ ಕುದಿಸಿ, ಕಷಾಯ ಚೆನ್ನಾಗಿ ಕುದಿ ಬಂದ ಮೇಲೆ ಹಾಲು ಹಾಕಿ ಕುದಿಸಿ, ಬಿಸಿ-ಬಿಸಿ ಕಷಾಯ ಕುಡಿಯಿರಿ.