ಮಕ್ಕಳ ಎದುರೇ ಪತ್ನಿ ಮತ್ತು ಅಜ್ಜಿಯನ್ನ ಕೊಡಲಿಯಿಂದ ಪತಿ ಕೊಚ್ಚಿ ಕೊಂದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ನಡೆದಿದೆ.
ಮುದಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಿ ದರ್ಜೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ದುರ್ಗಪ್ಪ ಕೊಲೆ ಮಾಡಿದ್ದು, ಪತ್ನಿ ಜ್ಯೋತಿ ಮತ್ತು ದ್ಯಾಮವ್ವ ಕೊಲೆಯಾಗಿದ್ದಾರೆ.
ಕಾಲೇಜು ವಿದ್ಯಾಭ್ಯಾಸದ ವೇಳೆ ಜ್ಯೋತಿಯನ್ನು ಪ್ರೀತಿಸಿ ದುರ್ಗಪ್ಪ ಅಂತರ್ಜಾತಿ ವಿವಾಹ ವಿವಾಹವಾಗಿದ್ದ. ಈ ಹಿನ್ನೆಲೆಯಲ್ಲಿ ಜ್ಯೋತಿ ಕುಟುಂಬದವರು ದೂರವಾಗಿದ್ದರು. ದಂಪತಿಗೆ ನಾಲ್ಕು ಹೆಣ್ಣು-ಮಕ್ಕಳು ಆಗಿದ್ದವು. ಸುಖವಾಗಿದ್ದ ಸಂಸಾರ ದುರ್ಗಪ್ಪ ಕುಡಿತದ ಚಟಕ್ಕೆ ಬಿದ್ದ ನಂತರ ಕಲಹಕ್ಕೆ ಕಾರಣವಾಯಿತು.
ಮದ್ಯಪಾನ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದ ದುರ್ಗಪ್ಪ ಪದೇಪದೆ ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಅಜ್ಜಿ ಮೊಮ್ಮಗನ ಮನೆಯಲ್ಲಿ ಇರಲು ನಾಲ್ಕು ದಿನಗಳ ಹಿಂದೆಯಷ್ಟೇ ಬಂದಿದ್ದರು. ವಿಧಿಯಾಟದಿಂದ ಪತ್ನಿ ಹಾಗೂ ಅಜ್ಜಿ ಇಬ್ಬರೂ ಕೊಲೆಯಾಗಿದ್ದಾರೆ.
ಶುಕ್ರವಾರ ಮುಂಜಾನೆ ಜ್ಯೋತಿ ಹಾಗೂ ಅಜ್ಜಿ ದ್ಯಾಮವ್ವಳನ್ನ ದುರ್ಗಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದು, ಕೊಡಲಿಯನ್ನ ಕೆಲಸ ಮಾಡ್ತಿದ್ದ ಆಸ್ಪತ್ರೆ ಮೂಲೆಯೊಂದರಲ್ಲಿ ಇರಿಸಿ ಪರಾರಿಯಾಗಿದ್ದ. ಮುದಗಲ್ ಪೊಲೀಸರು ಶೋಧ ಕಾರ್ಯ ನಡೆಸಿ ಆಸ್ಪತ್ರೆ ಪಕ್ಕದ ಇಂದಿರಾ ಕ್ಯಾಂಟಿನ್ನಲ್ಲಿ ಅವಿತು ಕೂತಿದ್ದ ಆರೋಪಿ ದುರ್ಗಪ್ಪನನ್ನ ವಶಕ್ಕೆ ಪಡೆದಿದ್ದಾರೆ.
ಕಳೆದ 8 ತಿಂಗಳಿನಿಂದ ಸಂಬಳ ಆಗದಿದ್ದಕ್ಕೆ ನೊಂದಿದ್ದ ದುರ್ಗಪ್ಪ ಹಣಕಾಸಿನ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದು, ಅದೇ ಕೋಪದಲ್ಲಿ ಇಬ್ಬರನ್ನೂ ಕೊಂದಿರಬಹುದು ಎಂದು ಶಂಕಿಸಲಾಗಿದ್ದು, ನಿಜವಾದ ಕಾರಣ ವಿಚಾರಣೆ ನಂತರವಷ್ಟೇ ಬೆಳಕಿಗೆ ಬರಬೇಕಿದೆ. ಮುದಗಲ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ದುರ್ಗಪ್ಪನನ್ನ ವಿಚಾರಣೆಗೊಳಪಡಿಸಿದ್ದಾರೆ.