ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರವನ್ನು ಉರುಳಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಬಾರಮಂಕಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದೆರಡು ಚುನಾವಣೆಯಲ್ಲಿ ತಮಗೆ ಮತ ಚಲಾಯಿಸಿದ್ದರಿಂದ 500 ವರ್ಷಗಳಿಂದ ಸಾಧ್ಯವಾಗದ ರಾಮಮಂದಿರ ನಿರ್ಮಾಣ ಸಾಧ್ಯವಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರ ವಿವಾದದ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದು, ರಾಮಮಂದಿರವನ್ನು ಉರುಳಿಸಲಿದೆ ಎಂದು ಅವರು ಹೇಳಿದರು.
ಸಮಾಜವಾದಿ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರದಲ್ಲಿರುವ ರಾಮಲಲ್ಲನನ್ನು ಮತ್ತೆ ಹಳೆಯ ಶಿಬಿರಕ್ಕೆ ಸ್ಥಳಾಂತರಿಸುತ್ತಾರೆ. ದೇವಸ್ಥಾನದ ಮೇಲೆ ಬುಲ್ಡೋಜರ್ ಚಲಿಸಲಿದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಗೆ ದೇಶ ಮುಖ್ಯವಲ್ಲ. ಕುಟುಂಬ ಮುಖ್ಯ. ಅದಕ್ಕಾಗಿ ದೇಶವನ್ನು ಬಲಿಕೊಡಲು ಅವರು ಸಿದ್ಧ ಎಂದು ಮೋದಿ ಆರೋಪಿಸಿದರು.