ತಾಕತ್ತಿದ್ದರೆ ಕೂಡಲೇ ಸರ್ಕಾರ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಯಡಿಯೂರಪ್ಪ ಸವಾಲೆಸೆದಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮೂಡಾ ಸೈಟು ಹಂಚಿಕೆ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿದ್ದು, ನೈತಿಕ ಹೊಣೆ ಹೊತ್ತು ಕೂಡಲೇ ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕೆಂದು ಎಂದು ಒತ್ತಾಯಿಸಿದರು.
ಲೋಕಸಭಾ ಚುನಾವಣೆ ಮುಗಿದಿದೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಎನ್ ಡಿಎ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ 19 ಕ್ಷೇತ್ರಗಳಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಪಕ್ಷ ಗೆದ್ದಿದೆ. ಮೊನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ 142 ಕಡೆ ಬಹುಮತ ಪಡೆದಿದೆ. ಈಗ ಚುನಾವಣೆ ನಡೆದರೆ ಬಿಜೆಪಿ 135-140ಕ್ಕೂ ಹೆಚ್ಚು ಸೀಟು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದು ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಅಷ್ಟೇ ಸತ್ಯ. 135 ಸ್ಥಾನ ಪಡೆದ ಕಾಂಗ್ರೆಸ್ ಪಕ್ಷ ಈಗ 142ರಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಸಿಎಂ, ಡಿಸಿಎಂ, ಹಾಗೂ 17 ಸಚಿವರ ಸ್ವಕ್ಷೇತ್ರಗಳಲ್ಲೇ ಹಿನ್ನಡೆ ಅನುಭವಿಸಿದೆ ಎಂದು ಯಡಿಯೂರಪ್ಪ ವಿವರಿಸಿದರು.
ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರ ಜನ ವಿರೋಧಿಯಾಗಿದ್ದು, ಅಧಿಕಾರ ಮುಂದುವರಿಯಲು ಯಾವುದೇ ನೈತಿಕತೆ ಹೊಂದಿಲ್ಲ. ಹಣಬಲ, ತೋಳ್ಬಲ ಹತ್ತು ಆಮಿಷಗಳ ನಡುವೆ ರಾಜ್ಯದ ಜನರು ಮೋದಿಗೆ ಜನಮತ ನೀಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ತಮ್ಮ ಕಡೆಯಿಂದ ಸ್ವಲ್ಪ ಹಿನ್ನಡೆ ಆಗಿದೆ. ಆದರೆ ಕಾಂಗ್ರೆಸ್ ನ ದುರಾಡಳಿತ ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ ಜನರು ಮತ ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳಿಂದ ದಿವಾಳಿಯಾಗಿದೆ. ಶಾಸಕರ ಅನುದಾನಕ್ಕೂ ಕತ್ತರಿ ಹಾಕಿದೆ. ಗ್ಯಾರಂಟಿ ಗಳ ಮೂಲಕ ಎಲ್ಲದಕ್ಕೂ ದರ ಜಾಸ್ತಿ ಮಾಡಿದ್ದಾರೆ. ಖಜಾನೆ ಖಾಲಿ ಆಗಿದೆ, ಅಭಿವೃದ್ಧಿ ಕುಂಠಿತ ಆಗಿದೆ. ಕಾಂಗ್ರೆಸ್ ಮುಖಂಡರೇ ಗ್ಯಾರಂಟಿ ರದ್ದು ಮಾಡಿ. ಅಭಿವೃದ್ಧಿ ಹಣ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಮುದ್ರಾಂಕ ಶುಲ್ಕ, ಸಾರಿಗೆ ದರ, ವಿದ್ಯುತ್ ದರ, ಅಬಕಾರಿ, ಪಹಣಿ, ದರ ಏರಿಕೆ ಮಾಡಲಾಗಿದೆ. ಸಿಕ್ಕಸಿಕ್ಕ ಕಡೆ ತೆರಿಗೆ ಏರಿಸಿ ದರ ಏರಿಸಿ, ಜನರ ಸಂಪನ್ಮೂಲ ಲೂಟಿ ಮಾಡ್ತಿದ್ದಾರೆ. ಸರ್ಕಾರ ಪಾಪರ್ ಆಗದೆ ಇದ್ದಿದ್ರೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿಸುವ ಅಗತ್ಯತೆ ಇರಲಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಚನ್ನಗಿರಿ ಪೊಲೀಸ್ ಠಾಣೆ ಮುತ್ತಿಗೆ, ಉಡುಪಿ ಗ್ಯಾಂಗ್ ವಾರ್, ಬೆಳಗಾವಿ ದಲಿತ ಮಹಿಳೆ ಮೇಲೆ ದೌರ್ಜನ್ಯ ನಡೆದಿದೆ. ಇದನೆಲ್ಲ ನೋಡಿದ್ರೆ ಕಾಂಗ್ರೆಸ್ ಕಾರ್ಯವೈಖರಿ ಏನೆಂದು ಗೊತ್ತಾಗುತ್ತದೆ. ಎಸ್ಟಿ ಅಭಿವೃದ್ಧಿ ನಿಗಮದಲ್ಲಿ ೧೮೭ ಕೋಟಿ ಹಗರಣ ನಡೆದಿದೆ. ಮುಡಾ ಅಕ್ರಮ ದಲ್ಲಿ ಸಿಎಂ ಕುಟುಂಬ ಶಾಮೀಲಾಗಿದ್ದಾರೆ, ಸಿಎಂರಿಂದಲೇ ಅಕ್ರಮ ಆಗಿದೆ. ಇದರ ಬಗ್ಗೆ ನಾವು ನೀವು ಜನರಿಗೆ ಮನದಟ್ಟು ಮಾಡಬೇಕಿದೆ. ವಿಧಾನಸಭೆ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿ ಎಂದು ಅವರು ಶಾಸಕರಿಗೆ ಕರೆ ನೀಡಿದರು.