ಶತಮಾನಗಳ ಹಿಂದೆ ಸಾಮಾನ್ಯವಾಗಿ ನಮ್ಮ ಆಹಾರಗಳಲ್ಲಿ ಸಕ್ಕರೆ ಬಳಕೆ ಇರಲಿಲ್ಲ. ಬೆಲ್ಲವನ್ನೇ ಬಳಸಲಾಗುತ್ತಿತ್ತು. ಈಗ ಎಲ್ಲವೂ ಸಕ್ಕರೆಮಯ. ಆದರೆ ಮತ್ತೆ ಬೆಲ್ಲದ ಬಳಕೆಗೆ ಒಲವು ಹೆಚ್ಚುತ್ತಿದೆ. ಇದಕ್ಕೆ ಕಾರಣ ಬೆಲ್ಲದಲ್ಲಿರುವ ಆರೋಗ್ಯಕಾರಿ ಅಂಶಗಳು ಜನರಿಗೆ ಮನವರಿಕೆ ಆಗುತ್ತಿರುವುದು.
ಸಕ್ಕರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಬೆಲ್ಲ ಉತ್ತಮ ಎಂಬ ಹಿರಿಯರ ಅನುಭವದ ಮಾತಿಗೆ ಬೆಲೆ ಸಿಗಲಾರಂಭಿಸಿದೆ. ಇತ್ತೀಚೆಗೆ ಕೆಲವು ಹೊಟೇಲ್ ಗಳಲ್ಲಿ ಕೂಡ ಬೆಲ್ಲ ಹಾಕಿ ಕಾಫಿ-ಟೀ ತಯಾರಿಸಲು ಆರಂಭಿಸಿದ್ದಾರೆ.
ಬೆಲ್ಲದಲ್ಲಿ ದೇಹಕ್ಕೆ ಬೇಕಾದ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ, ಮತ್ತು ಅನೇಕ ರೀತಿಯ ಖನಿಜಗಳು ಸಿಗುತ್ತವೆ. ಇದು ಮೂಳೆ ಬಲಪಡಿಸಲು, ರಕ್ತ ಶುದ್ಧಿ ಮಾಡಲು ನೆರವಾಗುವುದಲ್ಲದೆ
ಜಾಂಡಿಸ್, ಮಲಬದ್ಧತೆ ಸಮಸ್ಯೆ ನಿಯಂತ್ರಿಸುತ್ತದೆ. ಸುಸ್ತು, ಬಳಲಿಕೆಯಾಗುತ್ತಿದೆ ಎನಿಸಿದರೆ ನೀರಿನ ಜೊತೆ ಒಂದು ತುಂಡು ಬೆಲ್ಲ ತಿಂದರೆ ಚೈತನ್ಯ ಬರುತ್ತದೆ. ನಿದ್ರಾಹೀನತೆ, ರಕ್ತಹೀನತೆ , ಶ್ವಾಸಕೋಶದ ಸಮಸ್ಯೆಗಳ ನಿವಾರಣೆಯಲ್ಲೂ ಬೆಲ್ಲ ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತ ಪ್ರಮಾಣದಲ್ಲಿ ಪ್ರತಿದಿನ ಬೆಲ್ಲ ಸೇವಿಸುತ್ತಿದ್ದರೆ ದೇಹಕ್ಕೆ ಉತ್ತಮ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ಸ್ ದೊರೆಯುವುದು.
ಆಯಾ ಋತುಮಾನಗಳಲ್ಲಿ ಬರುವ ನೆಗಡಿ, ಶೀತ ಜ್ವರಗಳ ನಿಯಂತ್ರಣಕ್ಕೆ ದಿನಕ್ಕೊಮ್ಮೆಯಾದರೂ ಬೆಲ್ಲ ಮಿಶ್ರಿತ ಹಾಲು ರಹಿತ ಚಹಾ, ಕಾಫಿ ಇಲ್ಲವೇ ಕಷಾಯ ಸೇವನೆ ಉತ್ತಮ.
ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲ ಸೇವಿಸಿದರೆ ಅತಿಸಾರ, ಹೊಟ್ಟೆನೋವು ಶುರುವಾಗುತ್ತದೆಯಾದ್ದರಿಂದ ಈ ಬಗ್ಗೆ ಎಚ್ಚರಿಕೆ ಅಗತ್ಯ.