ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿ 275 ಹಾಗೂ ಹರಿಯಾಣದ ರಾಷ್ಟ್ರೀಯ ಹೆದ್ದಾರಿ 709ರಲ್ಲಿ ಪ್ರಾಯೋಗಿಕವಾಗಿ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದರು.
ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹದ ಜೊತೆಗೆ ಈಗಿರುವ ಫಾಸ್ಟ್ ಟ್ಯಾಗ್ ಮಾದರಿ ಶುಲ್ಕ ವ್ಯವಸ್ಥೆಯೂ ಮುಂದುವರಿಯಲಿದೆ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದರು.
ಟೋಲ್ ಪ್ಲಾಜಾಗಳಲ್ಲಿ ಜಿಪಿಎಸ್ ಆಧಾರಿತ ಜಿಎನ್ ಎಸ್ ಎಸ್ ತಂತ್ರಜ್ಞಾನ ಅಳವಡಿಸಿರುವ ವಾಹನಗಳು ಸುಲಭವಾಗಿ ಟೋಲ್ ದಾಟಲು ನೆರವಾಗಲು ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, ಪ್ರಾಯೋಗಿಕ ಹಂತವಾಗಿ ಬೆಂಗಳೂರು-ಮೈಸೂರು ಮತ್ತು ಹರಿಯಾಣದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಅವರು ವಿವರಿಸಿದರು.
ಜಿಎನ್ ಎಸ್ ಎಸ್ ತಂತ್ರಜ್ಞಾನ ಆಧಾರಿತ ಸ್ಯಾಟಲೈಟ್ ಮೂಲಕ ಶುಲ್ಕ ಸಂಗ್ರಹಣೆಯಿಂದ ಚಾಲಕರು ತಾವು ಎಷ್ಟು ದೂರ ಕ್ರಮಿಸುತ್ತಾರೋ ಅಷ್ಟು ಮಾತ್ರ ಮಾತ್ರ ಶುಲ್ಕ ಸಂಗ್ರಹಿಸುವುದು ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯ ಪ್ರಮುಖ ಅಂಶವಾಗಿದೆ.
ವಾಹನಗಳು ಕ್ರಮಿಸಿದ ದೂರವನ್ನು ನಿಖರವಾಗಿ ಪತ್ತೆ ಹಚ್ಚಲು ಹಲವು ಉಪಗ್ರಹಗಳ ನೆರವನ್ನು ಪಡೆಯಲಾಗುತ್ತದೆ. ಫಾಸ್‌ಟ್ಯಾಗ್ ವ್ಯವಸ್ಥೆಯಲ್ಲಿ ಎಲ್ಲಾ ಚಾಲಕರು ರಸ್ತೆಯ ಪೂರ್ತಿ ಶುಲ್ಕವನ್ನು ಪಾವತಿಸುತ್ತಿದ್ದಾರೆ. ಇದಲ್ಲದೆ ಜಿಎನ್‌ಎಸ್‌ಎಸ್ ಅಳವಡಿಕೆಯಾದ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ಸರದಿಯಲ್ಲಿ ನಿಲ್ಲುವುದೂ ತಪ್ಪಲಿದೆ.
ದೇಶಾದ್ಯಂತ 697 ಹೆದ್ದಾರಿ ನಿರ್ಮಾಣ ಯೋಜನೆಗಳು ನಿಗದಿತ ಅವಧಿ ಮುಗಿದರೂ ಪೂರ್ಣಗೊಂಡಿಲ್ಲ ಎಂಬ ಪ್ರತಿಪಕ್ಷ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಪ್ರಕೃತಿ ವಿಕೋಪ ಸೇರಿದಂತೆ ನಾನಾ ಕಾರಣಗಳಿಂದ ವಿಳಂಬವಾಗಿದೆ ಎಂದರು.