ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಶೇ.66ರಷ್ಟು ಮತದಾನ ದಾಖಲಾಗಿದೆ. 2019ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಮತದಾನ ದಾಖಲಾಗಿದೆ.
ರಾಜ್ಯದಲ್ಲಿ ಮೊದಲ ಹಂತದ ಮತದಾನ 14 ಕ್ಷೇತ್ರಗಳಿಗೆ ಏಪ್ರಿಲ್ 18ರಂದು ನಡೆದಿತ್ತು. ಮಂಗಳವಾರ ಉಳಿದ 14 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಶೇ.66ರಷ್ಟು ಮತದಾನ ದಾಖಲಾಗಿದೆ. ಒಟ್ಟಾರೆ ಮತದಾನ ರಾಜ್ಯದಲ್ಲಿ ಶೇ.69ರಷ್ಟು ಆಗಿದೆ ಎಂದು ಮೂಲಗಳು ತಿಳಿಸಿದ್ದು, ಚುನಾವಣಾ ಆಯೋಗ ಬುಧವಾರ ಅಧಿಕೃತ ಘೋಷಣೆ ಮಾಡಲಿದೆ.
ಒಟ್ಟು 227 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರ ಸೇರಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಚುನಾವಣೆ ನಡೆದಿದ್ದು, 14 ಕ್ಷೇತ್ರಗಳಲ್ಲಿ ಸಂಜೆ. 5.30 ರ ವರೆಗೆ ಒಟ್ಟಾರೆ ಶೇ. 66 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇಂದು ಮತದಾನ ನಡೆದ 14 ಕ್ಷೇತ್ರಗಳ ಪೈಕಿ ಚಿಕ್ಕೋಡಿಯಲ್ಲಿ ಅತ್ಯಧಿಕ ಅಂದರೆ ಶೇ.72.75 ರಷ್ಟು ಮತದಾನವಾಗಿದೆ. ಶಿವಮೊಗ್ಗದಲ್ಲಿ ಶೇ.72.07, ಹಾಗೂ ಗುಲ್ಬರ್ಗದಲ್ಲಿ ಕನಿಷ್ಠ ಶೇ.57.20ರಷ್ಟು ಮತದಾನವಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಒಟ್ಟು 227 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಈ ಪೈಕಿ 206 ಪುರುಷರು ಮತ್ತು 21 ಮಹಿಳೆಯರಿದ್ದಾರೆ. ಎರಡನೇ ಹಂತದಲ್ಲಿ 28,269 ಮತಗಟ್ಟೆಗಳಲ್ಲಿ 2.59 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು.