7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 10 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಬಿಜೆಪಿ 2 ಸ್ಥಾನಕ್ಕೆ ಕುಸಿದು ಮುಖಭಂಗಕ್ಕೆ ಒಳಗಾಗಿದೆ.
ಜುಲೈ 10ರಂದು ನಡೆದ ಉಪಚುನಾವಣೆಯ ಶನಿವಾರ ಮತ ಎಣಿಕೆ ನಡೆಯಿತು. ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾಗಿದ್ದರೂ ಮೈತ್ರಿ ಪಕ್ಷಗಳ ಸಹಾಯದಿಂದ ಅಧಿಕಾರಕ್ಕೇರಿರುವ ಬಿಜೆಪಿಗೆ ಈ ಉಪ ಚುನಾವಣೆ ಅಗ್ನಿ ಪರೀಕ್ಷೆ ಆಗಿತ್ತು. ಉತ್ತಮ ಸಾಧನೆ ಮಾಡಿದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾದ ಇಂಡಿಯಾ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಮತ್ತೊಮ್ಮೆ ಮೇಲುಗೈ ಸಾಧಿಸಿದೆ.
ಪಶ್ಚಿಮ ಬಂಗಾಳ, ಬಿಹಾರ, ಉತ್ತಾಖಂಡ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ತಮಿಳುನಾಡು, ಪಂಜಾಬ್ ಗಳಲ್ಲಿ ಚುನಾವಣೆ ನಡೆದಿತ್ತು. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 2 ಸ್ಥಾನ ಗೆದ್ದಿದ್ದು ಬಿಟ್ಟರೆ ಮತ್ತೆಲ್ಲೂ ಖಾತೆಯನ್ನೇ ತೆರೆದಿಲ್ಲ.
ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸಕ್ಕು ಅವರ ಪತ್ನಿ ಕಮಲೇಶ್ ಥಾಕೂರ್ ಡೆಹ್ರಾ ಕ್ಷೇತ್ರದಲ್ಲಿ ಗೆದ್ದು ರಾಜಕೀಯಕ್ಕೆ ಪಾದರ್ಪಣೆ ಮಾಡಿದ್ದಾರೆ. ನಲಗಡ್ ಮತ್ತು ಹಿಮಾಪುರ್ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ.
ಪಶ್ಚಿಮ ಬಂಗಾಳದ 4 ಕ್ಷೇತ್ರಗಳ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಪಕ್ಷ ಬಾಗ್ದಾ, ರಾಣಾಘಾಟ್, ಮಣಿಕ್ಟಾಲಾ ಮತ್ತು ರಾಯ್ ಗಂಜ್ ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸಿ ಕ್ಲೀನ್ ಸ್ವೀಪ್ ಮಾಡಿತು. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ವಿಕ್ರವಾಂಡಿ ಕ್ಷೇತ್ರದಲ್ಲಿ ಗೆಲುವು ಕಂಡಿದೆ.
ಆಮ್ ಆದ್ಮಿ ಪಕ್ಷ ಪಂಜಾಬ್ ನ ಜಲಂಧರ್ ಕ್ಷೇತ್ರದಲ್ಲಿ ಗೆಲುವು ಕಂಡಿದೆ. ಮೊಹಿಂದರ್ ಭಾಗತ್ 37,325 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸುರಿಂದರ್ ಕೌರ್ ಅವರನ್ನು ಸೋಲಿಸಿದರೆ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಮ್ ಆದ್ಮಿ ಪಕ್ಷದ ಶೀತಲ್ ಬಿಜೆಪಿಗೆ ಸೇರ್ಪಡೆ ಆಗಿದ್ದರಿಂದ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಿಗದಿಯಾಗಿತ್ತು.
ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ನ ಕ್ವಾಜಿ ನಿಜಾಮುದ್ದೀನ್ 12,450 ಮತಗಳಿಂದ ಮಂಗಳೌರ್ ಕ್ಷೇತ್ರದಿಂದ ಬಿಜೆಪಿ ಮತ್ತು ಬಿಎಸ್ ಪಿ ಅಭ್ಯರ್ಥಿಗಿಂತ ಮುನ್ನಡೆ ಸಾಧಿಸಿ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.