ಜಿದ್ದಾಜಿದ್ದಿನ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ.
ಕೊಲಂಬೊದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 230 ರನ್ ಗಳಿಸಿದರೆ, ಭಾರತ ತಂಡ 47.5 ಓವರ್ ಗಳಲ್ಲಿ 230 ರನ್ ಗೆ ಆಲೌಟಾಯಿತು.
ಸಮಬಲ ಸಾಧಿಸಿ ಗೆಲುವಿನ ಹೊಸ್ತಿಲಲ್ಲಿದ್ದ ಭಾರತ ತಂಡ ಗೆಲ್ಲಲು 1 ರನ್ ಗಳಿಸಿದ್ದಾಗ ಚಿರತ್ ಅಸ್ಲಂಕಾ ದಾಳಿಯಲ್ಲಿ ಸತತ 2 ವಿಕೆಟ್ ಕಳೆದುಕೊಂಡು ಆಲೌಟಾಗುವ ಮೂಲಕ ಗೆಲುವಿನ ಹೊಸ್ತಿಲಲ್ಲಿ ಎಡವಿತು.
ಶ್ರೀಲಂಕಾ ಪರ ನಾಯಕ ಚರಿತ್ ಅಸ್ಲಾಂಕಾ 30 ರನ್ ಗೆ 3 ಮತ್ತು ವಹಿಂದು ಅಸರಂಗ 58 ರನ್ ಗೆ 3 ವಿಕೆಟ್ ಪಡೆದು ಭಾರತವನ್ನು ಕಟ್ಟಿ ಹಾಕಿದರು. ದುನಿತ್ ವೆಲ್ಲಾಲೆಗೆ 2 ವಿಕೆಟ್ ಗಳಿಸಿದರು.
ನಾಯಕ ರೋಹಿತ್ ಶರ್ಮ ಅರ್ಧಶತಕ ಗಳಿಸಿದ್ದೂ ಬಿಟ್ಟರೆ ಭಾರತ ಪರ ಯಾವೊಬ್ಬ ಬ್ಯಾಟ್ಸ್ ಮನ್ ನೆಲಕಚ್ಚಿ ಆಡಲಿಲ್ಲ. ಟಿ-20 ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ಏಕದಿನ ತಂಡದಲ್ಲಿ ಮೊದಲ ಬಾರಿ ಕಾಣಿಸಿಕೊಂಡ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಮಿಂಚಲು ವಿಫಲರಾದರು
ರೋಹಿತ್ ಶರ್ಮ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 58 ರನ್ ಬಾರಿಸಿ ಔಟಾದರೆ, ವಿರಾಟ್ ಕೊಹ್ಲಿ 32 ಎಸೆತಗಳಲ್ಲಿ 2 ಬೌಂಡರಿ ಸಹಾಯದಿಂದ 24 ರನ್ ಗಳಿಸಿ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ (31) ಮತ್ತು ಅಕ್ಸರ್ ಪಟೇಲ್ (33) 6ನೇ ವಿಕೆಟ್ ಗೆ 57 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಲು ಯತ್ನಿಸಿದರು. ಆದರೆ ಇವರು ಔಟಾಗುತ್ತಿದ್ದಂತೆ ತಂಡ ಕುಸಿತ ಕಂಡಿತು. 24 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 25 ರನ್ ಬಾರಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಗೆಲ್ಲಲು 1 ರನ್ ಗಳಿಸಬೇಕಾದಾಗ ಔಟಾಗಿ ನಿರಾಸೆ ಮೂಡಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಆರಂಭಿಕ ಪಾಥುಮ್ ನಿಸ್ಸಾಂಕಾ ಮತ್ತು ದುನಿತ್ ವೆಲ್ಲಾಲಗೆ ಅರ್ಧಶತಕಗಳಿಂದ ಉತ್ತಮ ಮೊತ್ತ ಕಲೆಹಾಕಿತು. ನಿಸ್ಸಾಂಕಾ 75 ಎಸೆತಗಳಲ್ಲಿ 9 ಬೌಂಡರಿ ಒಳಗೊಂಡ 56 ರನ್ ಬಾರಿಸಿ ಉತ್ತಮ ಆರಂಭ ನೀಡಿದರೆ, ಮಧ್ಯಮ ಕ್ರಮಾಂಕದಲ್ಲಿ ದುನಿತ್ 65 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 67 ರನ್ ಗಳಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಗಳಿಸಿದರು.