ಮಳೆಯ ಅಡ್ಡಿಯಿಂದ ಕಡಿತಗೊಂಡ ಪಂದ್ಯದಲ್ಲಿ ಭಾರತ ತಂಡ ಡಕ್ ವರ್ತ್ ಲೂಯಿಸ್ ನಿಯಮದಡಿ 7 ವಿಕೆಟ್ ಗಳಿಂದ ಶ್ರೀಲಂಕಾ ವಿರುದ್ಧ ಜಯ ಗಳಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯನ್ನು 2-0ಯಿಂದ ವಶಪಡಿಸಿಕೊಂಡಿದೆ.
ಪಲ್ಲೆಕೆಲ್ಲೆಯಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 161 ರನ್ ಸಂಪಾದಿಸಿತು. ಭಾರತ ಬ್ಯಾಟಿಂಗ್ ಆರಂಭಿಸಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದ್ದಾಗ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು.
ಅಂಪೈರ್ ಗಳು 8 ಓವರ್ ಗಳಲ್ಲಿ 78 ರನ್ ಗಳ ಗುರಿ ಒಡ್ಡಿತು. ಭಾರತ 6.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಗೌತಮ್ ಗಂಭೀರ್ ಮತ್ತು ಸೂರ್ಯಕುಮಾರ್ ಸಾರಥ್ಯದ ಭಾರತ ತಂಡ ಸರಣಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದು, ಇನ್ನು ಒಂದು ಪಂದ್ಯ ಬಾಕಿ ಇದ್ದು, ಕ್ಲೀನ್ ಸ್ವೀಪ್ ಗುರಿ ಹೊಂದಿದೆ.
ಆರಂಭಿಕನಾಗಿ ಮೊದಲ ಬಾರಿ ಆಡಲು ಅವಕಾಶ ಪಡೆದ ಸಂಜು ಸ್ಯಾಮ್ಸನ್ (0) ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿ ನಿರಾಸೆ ಮೂಡಿಸಿದರು. ಆದರೆ ಯಶಸ್ವಿ ಜೈಸ್ವಾಲ್ (30), ನಾಯಕ ಸೂರ್ಯ ಕುಮಾರ್ ಯಾದವ್ (26) ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 22) ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಸ್ಪಿನ್ನರ್ ರವಿ ಬಿಶ್ನೋಯಿ (26/3) ಮಾರಕ ದಾಳಿಗೆ ತತ್ತರಿಸಿ ಬೃಹತ್ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು. ಅರ್ಷದೀಪ್ ಸಿಂಗ್, ಅಕ್ಸರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಗಳಿಸಿ ಲಂಕೆ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿದರು.
ಶ್ರೀಲಂಕಾ ಪರ ಕುಶಾಲ್ ಪೆರೆರಾ (53) ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು. ಪಾಥುಮ್ ನಿಸ್ಸಾಂಕ (32), ಕಮಿಂಡು ಮೆಂಡಿಸ್ (26) ತಕ್ಕಮಟ್ಟಿಗೆ ಪ್ರದರ್ಶನ ನೀಡಿದರು.