ಭಾರತ ಸರ್ಕಾರದ ಏಜೆಂಟ್ ಗಳು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಕೆನಡಾ ಗಂಭೀರ ಆರೋಪ ಮಾಡಿದೆ. ಈ ಮೂಲಕ ಪರಸ್ಪರ ರಾಯಭಾರ ಅಧಿಕಾರಿಗಳನ್ನು ಹೊರಹಾಕಿದ ಬೆನ್ನಲ್ಲೇ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಉಲ್ಭಣವಾಗಿದೆ.
ಖಾಲಿಸ್ತಾನಿ ಮುಖಂಡ ಹಾಗೂ ಕೆನಡಾ ನಿವಾಸಿ ಹರ್ದೀಪ್ ನಿಜ್ಜಾರ್ ಹತ್ಯೆ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಈ ಹಿಂದೆ ಆರೋಪಿಸಿದ್ದ ಕೆನಡಾ ಸರ್ಕಾರ ಇದೀಗ ವಿಷಯವನ್ನು ಮರುಪ್ರಸ್ತಾಪಿಸಿದ್ದು, ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿರುವ ಖಾಲಿಸ್ತಾನಿ ಮುಖಂಡರ ಹತ್ಯೆ ಹಿಂದೆ ಭಾರತದ ಸರ್ಕಾರ ಕೈವಾಡವಿದೆ ಎಂದು ಆರೋಪಿಸಿದೆ.
ದಕ್ಷಿಣ ಏಷ್ಯಾ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದು ಅದರಲ್ಲೂ ಖಾಲಿಸ್ತಾನಿ ಹೋರಾಟಗಾರರನ್ನು ಪ್ರಧಾನವಾಗಿ ಹತ್ತಿಕ್ಕಲು ಕೇಂದ್ರ ಸರ್ಕಾರ ದಾಳಿ ಮಾಡಿದೆ. ಇದಕ್ಕಾಗಿ ಸಂಘಟನಾತ್ಮಕ ಅಪರಾಧ ಮಾಡುವವರಿಗೆ ನೆರವು ನೀಡುತ್ತಿದೆ ಎಂದು ಕೆನಡಾದ ಹಂಗಾಮಿ ಕಮಿಷನರ್ ಮೈಕ್ ಡುನ್ಹೆ ಹೇಳಿದ್ದಾರೆ.
ಕೆನಡಾದಲ್ಲಿ ವಾಸವಾಗಿರುವ ನಿರ್ದಿಷ್ಟ ವ್ಯಕ್ತಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ರಾಯಭಾರ ಕಚೇರಿಯ ಕೆಲವು ಅಧಿಕಾರಿಗಳ ಮೂಲಕ ಸಂಗ್ರಹಿಸುತ್ತಿದೆ. ಈ ಮಾಹಿತಿಗಳನ್ನು ಗ್ಯಾಂಗ್ ಸ್ಟರ್ ಗಳಿಗೆ ರವಾನಿಸಿ ಅವರ ಮೂಲಕ ಬೆದರಿಕೆ, ಸುಲಿಗೆ, ಕೊಲೆಯಂತಹ ಕ್ರಿಮಿನಲ್ ಅಪರಾಧಗಳನ್ನು ಮಾಡಲು ಪ್ರಚೋದಿಸುತ್ತಿದೆ ಎಂದು ಅವರು ವಿವರಿಸಿದರು.