ಭಾರತೀಯರ ತಲಾ ಆದಾಯ ತುಂಬಾ ಕಡಿಮೆ ಇದೆ. ಪಾವತಿಸುವ ಸಾಮರ್ಥ್ಯ ಇಲ್ಲ. ಆದ್ದರಿಂದ ಯಾವುದೇ ಯೋಜನೆ ಮಾಡಬೇಕಾದರೆ ಜಂಟಿಯಾಗಿ ಮಾಡಿ ಕಡಿಮೆ ಶುಲ್ಕ ವಿಧಿಸಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಗುರುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಜರ್ಮನಿ, ಆಸ್ಟ್ರೀಯಾ ಮತ್ತು ಸ್ವಿಜರ್ ಲೆಂಡ್ ದೇಶಗಳಿಂದ ಬಂಡವಾಳ ಹೂಡಿಕೆ ಮಾಡಿಕೊಳ್ಳಿ. ಇದರಿಂದ ಕಡಿಮೆ ವೆಚ್ಚದಲ್ಲಿ ಮಾಡಿ ಜನರಿಂದ ಕಡಿಮೆ ಶುಲ್ಕ ಪಡೆಯಬಹುದು ಎಂದರು.
ದೇಶದಲ್ಲಿ 7.93 ಶತಕೋಟಿ ಡಾಲರ್ ಮೊತ್ತದ ರೂಪ್ ವೇ, ಕೇಬಲ್ ಕಾರ್ ಸೇರಿದಂತೆ 390 ಯೋಜನೆಗಳಿಗೆ ಬೇಡಿಕೆ ಇದೆ. ಅಲ್ಲದೇ 300 ಸುರಂಗ ಮಾರ್ಗಗಳ ನಿರ್ಮಾಣ ಪ್ರಸ್ತಾಪ ಸರ್ಕಾರದ ಮುಂದಿದೆ. ಈ ಯೋಜನೆಗಳಿಗೆ ಜರ್ಮನಿ, ಆಸ್ಟ್ರೀಯಾ ಮತ್ತು ಸ್ವಿಜರ್ ಲೆಂಡ್ ಕಂಪನಿಗಳ ಜೊತೆ ಬಂಡವಾಳ ಹೂಡಿಕೆ ಮೂಲಕ ಸಹಭಾಗಿತ್ವದೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ದೇಶದ ಜನರ ಖರೀದಿ ಸಾಮರ್ಥ್ಯ ಕಡಿಮೆ ಇದೆ. ಇದರ ಹೊರತಾಗಿಯೂ 7.93 ಶತಕೋಟಿ ಡಾಲರ್ ಮೌಲ್ಯದ ರೂಪ್ ವೇ ಮತ್ತು ಕೇಬಲ್ ಕಾರ್ ಯೋಜನೆಗಳಿಗೆ ಬೇಡಿಕೆ ಇದೆ. ಒಂದು ವೇಳೆ ಇದು ಕಡಿಮೆ ವೆಚ್ಚದಲ್ಲಿ ಮಾಡಲು ಸಾಧ್ಯವಾದರೆ ದೊಡ್ಡ ಸಾಧನೆ ಮಾಡಿದಂತೆ ಎಂದು ನಿತೀನ್ ಗಡ್ಕರಿ ಅಭಿಪ್ರಾಯಪಟ್ಟರು.
ಭಾರತದಲ್ಲಿ ಅವಕಾಶಗಳು ಆಕಾಶದೆತ್ತರಷ್ಟು ಇದೆ. ನಾನು ಮುಕ್ತವಾಗಿದ್ದೇನೆ. ಏನು ಮಾಡಲು ಸಾಧ್ಯ ಎಂಬ ಬಗ್ಗೆ ನೇರವಾಗಿ ಬಂದು ಚರ್ಚಿಸಿ ಎಲ್ಲರೂ ಸೇರಿ ಕೆಲಸ ಮಾಡೋಣ. ದೇಶದ ಆರ್ಥಿಕ ಪರಿಸ್ಥಿತಿ ಅರಿತು ನಾವು ರಸ್ತೆ ನಿರ್ಮಾಣದಲ್ಲಿ ಈಗಾಗಲೇ ಹಲವಾರು ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿದ್ದೇವೆ ಎಂದು ಅವರು ವಿವರಿಸಿದರು.