ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮ ದ್ವಿಶತಕ ಹಾಗೂ ಸ್ಮೃತಿ ಮಂದಾನ ಶತಕಗಳ ನೆರವಿನಿಂದ ಭಾರತ ವನಿತೆಯರ ತಂಡ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನೇ 525 ರನ್ ಕಲೆ ಹಾಕಿ ಇತಿಹಾಸ ನಿರ್ಮಿಸಿದೆ.
ಚೆನ್ನೈ ನಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 525 ರನ್ ಕಲೆ ಹಾಕಿತು. ಈ ಮೂಲಕ 147 ವರ್ಷಗಳ ಟೆಸ್ಟ್ ಕ್ರಿಕೆಟ್ ನಲ್ಲಿ ಇದೇ ಮೊದಲ ಬಾರಿಗೆ ಪಂದ್ಯದ ಮೊದಲ ದಿನ ಹಾಗೂ ಒಂದೇ ದಿನದಲ್ಲಿ ಇಷ್ಟು ದೊಡ್ಡ ಮೊತ್ತ ಕಲೆಹಾಕಿದ ದಾಖಲೆ ಬರೆದಿದೆ.
ವಿಶೇಷ ಅಂದರೆ ಪುರುಷ ಹಾಗೂ ಮಹಿಳಾ ತಂಡಗಳಲ್ಲೂ ಇದು ದಾಖಲೆಯಾಗಿದೆ. ಈ ಹಿಂದೆ ಶ್ರೀಲಂಕಾ ಪುರುಷರ ತಂಡ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊಲೊಂದಲ್ಲಿ ಒಂದೇ ದಿನದಲ್ಲಿ 509 ರನ್ ಕಲೆ ಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು. 1935ರಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 431 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಮೊದಲ ವಿಕೆಟ್ ಗೆ 292 ರನ್ ಕಲೆ ಹಾಕಿ ಭರ್ಜರಿ ಆರಂಭ ನೀಡಿದರು. ಶೆಫಾಲಿ 197 ಎಸೆತಗಳಲ್ಲಿ 23 ಬೌಂಡರಿ ಮತ್ತು 8 ಸಿಕ್ಸರ್ ಒಳಗೊಂಡ 205 ರನ್ ಗಳಿಸಿ ರನೌಟ್ ಆದರೆ, ಸ್ಮೃತಿ ಮಂದಾನ 161 ಎಸೆತಗಳಲ್ಲಿ 27 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 149 ರನ್ ಗಳಿಸಿ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ಜೆಮಿಹಾ ರೋಡ್ರಿಗಜ್ (55), ನಾಯಕಿ ಹರ್ಮನ್ ಪ್ರೀತ್ ಕೌರ್ (ಅಜೇಯ 42), ರಿಚಾ ಘೋಷ್ (ಅಜೇಯ 43) ರನ್ ಬಾರಿಸಿ ಭಾರತ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು.