ಬಾಲಿವುಡ್ ನಟ ಅಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡಿಸ್ ಚಿತ್ರ ಭಾರತದಿಂದ ಆಸ್ಕರ್ 2025 ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದ ಏಕೈಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿದೇಶೀ ಚಿತ್ರ ವಿಭಾಗದಲ್ಲಿ ಲಾಪತಾ ಲೇಡಿಸ್ ಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಭಾರತೀಯ ಫಿಲ್ ಚೇಂಬರ್ ಸೋಮವಾರ ಪ್ರಕಟಿಸಿದೆ.
ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಬಯಸಿ 29 ಚಿತ್ರಗಳು ಅರ್ಜಿ ಸಲ್ಲಿಸಿದ್ದವು. ಇದರಲ್ಲಿ 12 ಹಿಂದಿ, 6 ತಮಿಳು ಹಾಗೂ 4 ಮಲಯಾಳಂ ಚಿತ್ರಗಳು ಸೇರಿದ್ದವು. ಆದರೆ ಎಲ್ಲ ಚಿತ್ರಗಳನ್ನು ಹಿಂದಿಕ್ಕಿ ಲಾಪತಾ ಲೇಡಿಸ್ ಚಿತ್ರ ಆಯ್ಕೆಯಾಗಿದೆ.
ಲಾಪತಾ ಲೇಡಿಸ್ ಚಿತ್ರವನ್ನು ಕಿರಣ್ ರಾವ್, ಅಮಿರ್ ಖಾನ್, ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದು, ಕಿರಣ್ ರಾವ್ ನಿರ್ಮಾಣದ ಜೊತೆ ನಿರ್ದೇಶನ ಜವಾಬ್ದಾರಿ ನಿರ್ವಹಿಸಿದ್ದರು. ಚಿತ್ರದಲ್ಲಿ ಬಹುತೇಕ ಹೊಸ ಮುಖಗಳೇ ಇದ್ದು, ಪ್ರಶಸ್ತಿ ವಿಜೇತ ಬಿಪ್ಲಬ್ ಗೋಸ್ವಾಮಿ ಅವರ ಲಾಪತಾ ಲೇಡಿಸ್ ಕೃತಿ ಆಧರಿಸಿ ಸಿನಿಮಾ ಮಾಡಲಾಗಿದೆ.
ಮಾರ್ಚ್ 1ರಂದು ಬಿಡುಗಡೆ ಆದ ಈ ಚಿತ್ರ ವಿಫಲವಾಗಿದ್ದರೂ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಆದ ನಂತರ ಟ್ರೆಂಡ್ ಸೃಷ್ಟಿ ಮಾಡಿತ್ತು. ಅಲ್ಲದೇ ಜಪಾನ್ ನಲ್ಲಿ ಕೂಡ ಈ ಚಿತ್ರಕ್ಕೆ ಅಪಾರ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಅಲ್ಲಿಯೂ ಬಿಡುಗಡೆಗೆ ಸಿದ್ಧತೆ ನಡೆದಿದೆ.