ಕಾವೇರಿ ಜಲನಯನ ಪ್ರದೇಶದಲ್ಲಿ ಸತತವಾಗಿ ಭಾರೀ ಮಳೆಯಾಗುತ್ತಿರುವುದರಿಂದ ಒಳಹರಿವು ಪ್ರಮಾಣ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಕೆಆರ್ ಎಸ್ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್ ಎಸ್ ಡ್ಯಾಂನಲ್ಲಿ ಶನಿವಾರ ಸಂಜೆಗೆ 120 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಆದರೆ ಭಾನುವಾರ ಬೆಳಿಗ್ಗೆ 2 ಅಡಿಗಳಷ್ಟು ನೀರು ಹರಿದು ಬಂದಿದ್ದು, ಜಲಾಶಯ ಭರ್ತಿಗೆ ಕೇವಲ 2 ಅಡಿಗಳಷ್ಟು ಮಾತ್ರ ಬಾಕಿ ಇದೆ. ಇದೇ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರೆ ಸಂಜೆಯ ವೇಳೆ ಜಲಾಶಯ ಭರ್ತಿಯಾಗಲಿದೆ ಎಂದು ಹೇಳಲಾಗಿದೆ.
ಮೈಸೂರು ಭಾಗದ ಕಬಿನಿ, ಹೇಮಾವತಿ, ಗೊರೂರು ಸೇರಿದಂತೆ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಕೆಆರ್ ಎಸ್ ಕೂಡ ಭರ್ತಿಯಾಗುವ ಮೂಲಕ ಈ ಬಾರಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿದಂತಾಗಿದೆ.
ಕೆಆರ್ ಎಸ್ ಜಲಾಶಯದ ಗರಿಷ್ಠ ಮಟ್ಟ 124 ಅಡಿಗಳಾಗಿವೆ. ಭಾನುವಾರ ಬೆಳಿಗ್ಗೆ ನೀರಿನ ಮಟ್ಟ 122.70 ಅಡಿಗೆ ಏರಿಕೆಯಾಗಿದೆ. ನದಿಯ ಒಳಹರಿವು ಶನಿವಾರ 51 ಸಾವಿರದಿಂದ ದಿಢೀರನೆ 69,617 ಸಾವಿರ ಕ್ಯೂಸೆಕ್ಸ್ ಗೆ ಏರಿಕೆಯಾಗಿದೆ. ಶನಿವಾರ 10 ಸಾವಿರ ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗುತ್ತಿತ್ತು. ಆದರೆ ಇದೀಗ 25 ಸಾವಿರ ಕ್ಯೂಸೆಕ್ಸ್ ಗೆ ಏರಿಕೆ ಮಾಡಲಾಗಿದೆ.
ಕಾವೇರಿ ನದಿ ಪಾತ್ರದಲ್ಲಿ ಇದೀಗ ಪ್ರವಾಹ ಭೀತಿ ಉಂಟಾಗಿದ್ದು, ಶ್ರೀರಂಗಪಟ್ಟಣದ ಸುತ್ತಮುತ್ತಲ ಸುಮಾರು 92 ಗ್ರಾಮಗಳಲ್ಲಿ ಆಸ್ತಿಪಾಸ್ತಿ, ಜಾನುವಾರ ರಕ್ಷಿಸಿಕೊಳ್ಳುವಂತೆ ಕಾವೇರಿ ನಿಗಮ ಮುನ್ನೆಚ್ಚರಿಕೆ ನೀಡಿದೆ. ಅಲ್ಲದೇ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕೆಆರ್‌ಎಸ್ ನೀರಿನ ಮಟ್ಟ ಗರಿಷ್ಠ ಮಟ್ಟ – 124.80 ಅಡಿ. ಇಂದಿನ ಮಟ್ಟ – 122.70 ಅಡಿ. ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ. ಇಂದಿನ ಸಾಮರ್ಥ್ಯ – 46.567 ಟಿಎಂಸಿ ಒಳ ಹರಿವು – 69,617 ಕ್ಯುಸೆಕ್ ಹೊರ ಹರಿವು – 27,184 ಕ್ಯುಸೆಕ್ (ನದಿ, ನಾಲೆ, ಕುಡಿಯುವ ನೀರು ಸೇರಿ)