ಹೆರಿಗೆ ವೇಳೆ ಮದ್ಯ ಸೇವಿಸಲು ಹೋಗಿದ್ದರಿಂದ ಮಹಿಳೆ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರಿಗೆ ಮಲೇಷ್ಯಾ ನ್ಯಾಯಾಲಯ 11.42 ಕೋಟಿ ರೂ. ದಂಡ ವಿಧಿಸಿದೆ.
2019 ಜನವರಿ 9ರಂದು ಈ ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದ 36 ವರ್ಷದ ಬಾಣಂತಿ ಪುನೀತಾ ಮೋಹನ್ 2ನೇ ಮಗುವಿನ ಹೆರಿಗೆ ವೇಳೆ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ವೇಳೆ ಅತೀವ ರಕ್ತಸ್ರಾವದಿಂದ ಮೃತಪಟ್ಟಿರುವುದು ದೃಢಪಟ್ಟಿತ್ತು.
ಮಲೇಷ್ಯಾ ಹೈಕೋರ್ಟ್ ಪುನೀತಾ ಮೋಹನ್ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಾಗಿದ್ದು, ಕರ್ತವ್ಯದಲ್ಲಿದ್ದ ಡಾ.ರವಿ ಮತ್ತು ಡಾ.ಷಣ್ಮುಗನ್ ಹಾಗೂ ಮೂವರು ನರ್ಸ್ ಗಳು ಯಾವುದೇ ಭದ್ರತೆ ನೀಡದೇ ಪಾರ್ಟಿ ಮಾಡಲು ತೆರಳಿದ್ದು ಅಪರಾಧ ಎಂದು ಹೇಳಿತು.
ಹೆರಿಗೆ ನಂತರ ರಕ್ತಸ್ರಾವ ಆಗುವುದು ಮತ್ತು ಇದರಿಂದ ಬಾಣಂತಿಗೆ ಸಾವು ಸಂಭವಿಸುವ ಸಾಧ್ಯತೆ ಇರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ರಕ್ತಸ್ರಾವದಿಂದ ನರಳುತ್ತಿದ್ದ ಪುನೀತಾ ಅವರನ್ನು ಉಸ್ತುವಾರಿ ವೈದ್ಯರಾಗಿದ್ದ ರವಿ ಕುಡಿಯಲು ಹೋಗುವುದಾಗಿ ಹೇಳಿ ಬಿಟ್ಟು ಹೋಗಿದ್ದರು. ಇದರಿಂದ ರಕ್ತಸ್ರಾವಕ್ಕೊಳಗಾದ ಮಗಳನ್ನು ನೋಡಿ ತಾಯಿ ಕಂಗಾಲಾಗಿದ್ದರು.
ಈ ಸಮಯದಲ್ಲಿ ಆಸ್ಪತ್ರೆಯ ಮುಖ್ಯಸ್ಥರಾದ ಷಣ್ಮುಗನ್ ಕೂಡ ಹೊರಟು ಹೋಗಿದ್ದರು. ಈ ವೇಳೆ ನೋಡಿಕೊಳ್ಳಬೇಕಿದ್ದ ನರ್ನ್ ಗಳು ಕೂಡ ಇರಲಿಲ್ಲ. ಇದರಿಂದ ಆಸ್ಪತ್ರೆಯಲ್ಲಿ ಯಾರೂ ಇರಲಿಲ್ಲ. ಸುಮಾರು 2 ಗಂಟೆಗಳ ಕಾಲ ಕಾದರೂ ಆಸ್ಪತ್ರೆಗೆ ವೈದ್ಯರು ಮರಳಲಿಲ್ಲ. ಇದರಿಂದ ತಾಯಿ ಮಗಳನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ ಅಷ್ಟರಲ್ಲಿ ಆಕೆ ಅತೀವ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು.