ನೆಸ್ಟ್ಲೆ ಕಂಪನಿ ವಿರುದ್ಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ಸ್ವಿಜರ್ಲೆಂಡ್ ಸರ್ಕಾರ, ಭಾರತಕ್ಕೆ ನೀಡಿದ್ದ ನೆಚ್ಚಿನ ದೇಶ [Most Favoured Nation] ಸ್ಥಾನಮಾನವನ್ನು ಹಿಂಪಡೆದಿದೆ.
ದ್ವಿಗುಣ ತೆರಿಗೆ ತಪ್ಪಿಸುವ ಒಪ್ಪಂದದ ಉಲ್ಲಂಘನೆ ಹಿನ್ನೆಲೆಯಲ್ಲಿ ಭಾರತದಲ್ಲಿ ಕಾರ್ಯ ನಿರ್ವಹಿಸುವ ಸ್ವಿಜರ್ಲೆಂಡ್ ಕಂಪನಿಗಳ ಮೇಲೆ ಸುಪ್ರೀಂಕೋರ್ಟ್ ತೀರ್ಪು ದೊಡ್ಡ ಪೆಟ್ಟು ನೀಡಿದೆ. ಇದರಿಂದ ಎರಡೂ ದೇಶಗಳ ನಡುವಿನ ಒಪ್ಪಂದದ ಉಲ್ಲಂಘನೆ ಆಗಿದೆ ಎಂದು ಸ್ವಿಜರ್ಲೆಂಡ್ ಆರೋಪಿಸಿದೆ.
ಸ್ವಿಜರ್ಲೆಂಡ್ ಹಣಕಾಸು ಇಲಾಖೆ 2023ರಲ್ಲಿ ನೆಸ್ಟ್ಲೆ ಕಂಪನಿ ವಿರುದ್ಧ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ್ದು, ಇದರಿಂದ ಮೋಸ್ಟ್ ಫೇವರ್ಡ್ ನೇಷನ್ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಭಾರತ ಸರ್ಕಾರವೂ ಈ ಮೊದಲೇ ದೇಶದಲ್ಲಿ ಹೂಡಿಕೆ ಮಾಡಿರುವ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ಓಇಸಿಡಿ ವ್ಯಾಪ್ತಿಗೆ ಬಂದಿದೆ. ಆದ್ದರಿಂದ ಈ ವ್ಯಾಪ್ತಿಗೆ ಬರುವ ರಾಷ್ಟ್ರ ಮತ್ತೊಮ್ಮೆ ಮೋಸ್ಟ್ ಫೇವರ್ಡ್ ನೇಷನ್ ಷರತ್ತಿಗೆ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ಹಿನ್ನೆಲೆಯಲ್ಲಿ ಸ್ವಿಜರ್ಲೆಂಡ್ ಕಂಪನಿಗಳ ಹಿತಾಸಕ್ತಿ ಗಮನಿಸಿ ನೆಚ್ಚಿನ ದೇಶ ಸ್ಥಾನವನ್ನು ಹಿಂಪಡೆಯಲಾಗಿದೆ ಎಂದು ಸ್ವಿಜರ್ಲೆಂಡ್ ಸರ್ಕಾರ ಆದೇಶದಲ್ಲಿ ತಿಳಿಸಿದೆ.
1961ರಲ್ಲಿ ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್ಮೆಂಟ್ [OECD] ಸ್ಥಾಪಿಸಲಾಗಿತ್ತು. ಈ ಸಂಘಟನೆ ಪ್ಯಾರಿಸ್ ನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ದತ್ತಾಂಶ, ವಿಶ್ಲೇಷಣೆ ಮತ್ತು ಸಾರ್ವಜನಿಕ ನೀತಿಯಲ್ಲಿನ ಉತ್ತಮ ಅಭ್ಯಾಸಗಳಿಗಾಗಿ ಫೋರಮ್ ಮತ್ತು ಜ್ಞಾನದ ಹಬ್ ಎಂದು ಕರೆಯುತ್ತದೆ.
ಸಾಕ್ಷ್ಯಾಧಾರಿತ ಅಂತರಾಷ್ಟ್ರೀಯ ಮಾನದಂಡಗಳನ್ನು ಸ್ಥಾಪಿಸಲು ಮತ್ತು ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನೀತಿ ನಿರೂಪಕರು, ಮಧ್ಯಸ್ಥಗಾರರು ಮತ್ತು ನಾಗರಿಕರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.