ಫುಕೆಟ್: ಹಿಂದೂಗಳ ಆರಾಧ್ಯದೈವಗಳಲ್ಲಿ ಒಂದಾದ ಶಿವನ ದೇವಸ್ಥಾನದ ಮಾಲೀಕತ್ವಕ್ಕಾಗಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ಯುದ್ಧ ಆರಂಭಗೊಂಡಿದ್ದು, ಎರಡೂ ದೇಶಗಳು ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದ್ದು, 17ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.
ಥಾಯ್ಲೆಂಡ್ ಮತ್ತು ಕಾಂಬೊಡಿಯಾ ನಡುವೆ ಹಲವಾರು ದಶಕಗಳಿಂದ ಗಡಿ ವಿವಾದ ಇದ್ದು, 11ನೇ ಶತಮಾನದ ಪ್ರೀ ವಿಯರ್ ಹಿಂದೂ ದೇವಾಲಯದ ಸುತ್ತಲಿನ ಪ್ರದೇಶದ ಮಾಲೀಕತ್ವದ ವಿವಾದ ಯುದ್ಧಕ್ಕೆ ಪ್ರಮುಖ ಕಾರಣವಾಗಿದೆ.
ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಎರಡೂ ದೇಶಗಳಿಗೆ ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಮಹತ್ವದ್ದಾಗಿದೆ. ಇತ್ತೀಚಿನ ಸಂಘರ್ಷಕ್ಕೆ ಪ್ರಚೋದನೆ ಎಂದರೆ ತಾ ಮುವೆನ್ ಥಾಮ್ ದೇವಾಲಯ ಸಂಕೀರ್ಣದ ಬಳಿ ಕಾಂಬೋಡಿಯಾ ಡ್ರೋನ್‌ಗಳು ಹಾರಾಟ ನಡೆಸಿವೆ ಎಂಬ ಆರೋಪ ಕೇಳಿಬಂದಿದೆ.
ಥಾಯ್ ಪಡೆಗಳು ಇದನ್ನು ಕಂಡ ನಂತರ ಗುಂಡಿನ ದಾಳಿ ಆರಂಭಿಸಿದವು. ಆದರೆ, ಕಾಂಬೋಡಿಯಾ ತನ್ನ ಪಡೆಗಳು “ಶಸ್ತ್ರಾಸ್ತ್ರಗಳ ದಾಳಿ”ಯಿಂದ ತಮ್ಮ ರಾಷ್ಟ್ರೀಯ ಭೂಪ್ರದೇಶವನ್ನು ರಕ್ಷಿಸಿಕೊಳ್ಳುತ್ತಿವೆ ಎಂದು ಹೇಳಿಕೊಂಡಿದೆ.
ಭೂಮಿಯ ಗಡಿರೇಖೆಯ ಅಸ್ಪಷ್ಟತೆಯು ಈ ಸಂಘರ್ಷದ ಪ್ರಮುಖ ಕಾರಣವಾಗಿದೆ. 1907ರಲ್ಲಿ ಫ್ರೆಂಚ್ ವಸಾಹತುಶಾಹಿ ಕಾಲದಲ್ಲಿ ರಚಿಸಲಾದ ನಕ್ಷೆಗಳನ್ನು ಕಾಂಬೋಡಿಯಾ ತನ್ನ ಹಕ್ಕುಗಳನ್ನು ಸಮರ್ಥಿಸಲು ಬಳಸಿದರೆ, ಥಾಯ್ಲೆಂಡ್ ಈ ನಕ್ಷೆಗಳ ಸಿಂಧುತ್ವವನ್ನು ಪ್ರಶ್ನಿಸುತ್ತದೆ.
ಪ್ರೀ ವಿಯರ್ ದೇವಾಲಯದ ಬಗ್ಗೆ ಅಂತಾರಾಷ್ಟ್ರೀಯ ನ್ಯಾಯಾಲಯ ಕಾಂಬೋಡಿಯಾ ಪರವಾಗಿ ತೀರ್ಪು ನೀಡಿದ್ದರೂ, ಸುತ್ತಮುತ್ತಲಿನ ಭೂಮಿಯ ಬಗ್ಗೆ ವಿವಾದ ಮುಂದುವರಿದಿದೆ. ಸಂಘರ್ಷದ ಪರಿಣಾಮವಾಗಿ ಸಾವುನೋವುಗಳು ಸಂಭವಿಸಿದ್ದು, ಥಾಯ್ಲೆಂಡ್ ತನ್ನ ಗಡಿಗಳನ್ನು ಮುಚ್ಚಿದೆ. ರಾಜತಾಂತ್ರಿಕ ಸಂಬಂಧಗಳು ಕುಸಿದಿದ್ದು, ಎರಡೂ ದೇಶಗಳು ಪರಸ್ಪರ ರಾಯಭಾರಿಗಳನ್ನು ಹೊರಹಾಕಿವೆ.
ಈ ಉದ್ವಿಗ್ನತೆಯು ಆರ್ಥಿಕತೆ ಮತ್ತು ಪ್ರಾದೇಶಿಕ ಸ್ಥಿರತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ದೀರ್ಘಕಾಲದ ಗಡಿ ವಿವಾದವು ಎರಡು ನೆರೆಯ ರಾಷ್ಟ್ರಗಳ ನಡುವೆ ವಿಶ್ವಾಸದ ಕೊರತೆ ಮತ್ತು ಐತಿಹಾಸಿಕ ಅಸಮಾಧಾನವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ರಾಜತಾಂತ್ರಿಕ ಮಾತುಕತೆಗಳ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ.


