ಕೆಳ ಕ್ರಮಾಂಕದಲ್ಲಿ ಕ್ಲಾಸೆನ್ ಹೆನ್ರಿಕ್ ಸಿಡಿಲಬ್ಬರದ ಅರ್ಧಶತಕದ ಹೋರಾಟದ ಹೊರತಾಗಿಯೂ ಸನ್ ರೈಸರ್ಸ್ ಹೈದರಾಬಾದ್ ತಂಡ 4 ರನ್ ಗಳಿಂದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ವೀರೋಚಿತ ಸೋಲುಂಡಿದೆ. ಈ ಮೂಲಕ ಕೆಕೆಆರ್ ಐಪಿಎಲ್ ಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 208 ರನ್ ಗಳಿಸಿತು. ಬೃಹತ್ ಮೊತ್ತ ಬೆಂಬತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಠಿಣ ಗುರಿ ಬೆಂಬತ್ತಿದ ಕೆಕೆಆರ್ ತಂಡ ಒಂದು ಹಂತದಲ್ಲಿ 16.5 ಓವರ್ ಗಳಲ್ಲಿ 145 ರನ್ ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಕ್ಲಾಸೆನ್ ಮತ್ತು ಶಹಬಾಜ್ ಅಹ್ಮದ್ 13 ರನ್ ಗೆ 68 ರನ್ ಜೊತೆಯಾಟದಿಂದ ತಂಡದಲ್ಲಿ ಸಂಚಲನ ಮೂಡಿಸಿದರು. ಆದರೆ ಈ ಜೋಡಿ ಒಬ್ಬರ ಹಿಂದೆ ಒಬ್ಬರು ಔಟಾಗುತ್ತಿದ್ದಂತೆ ತಂಡ ಸೋಲುಂಡಿತು.
ಕ್ಲಾಸೆನ್ 29 ಎಸೆತಗಳಲ್ಲಿ 8 ಸಿಕ್ಸರ್ ಸೇರಿದ 63 ರನ್ ಸಿಡಿಸಿದರೆ, ಶಹಬಾಜ್ ಅಹ್ಮದ್ 5 ಎಸೆತದಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಒಳಗೊಂಡ 16 ರನ್ ಚಚ್ಚಿದರು. ಕೊನೆಯ ಓವರ್ ನಲ್ಲಿ 19 ರನ್ ಗಳಿಸಬೇಕಿದ್ದಾಗ ಶಹಬಾದ್ ಅಹ್ಮದ್ 2 ಸಿಕ್ಸರ್ ಸಿಡಿಸಿದರು. ಇದರಿಂದ ಗೆಲ್ಲಲು 5 ರನ್ ಬೇಕಿತ್ತು. ಈ ಹಂತದಲ್ಲಿ ಹರ್ಷಿತ್ ರಾಣಾ ಎಸೆತದಲ್ಲಿ ಮೂರು ಎಸೆತಗಳ ಅಂತರದಲ್ಲಿ ಇಬ್ಬರೂ ಔಟಾಗಿ ತಂಡ ಗೆಲುವಿನ ಹೊಸ್ತಿಲಲ್ಲಿ ಎಡವಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆಆರ್ ತಂಡ ಆಲ್ ರೌಂಡರ್ ಆಂಡ್ರೆ ರಸೆಲ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 7 ಸಿಕ್ಸರ್ ನೊಂದಿಗೆ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು.