ಬಾಲಿವುಡ್ ನಟ ಶಾರೂಖ್ ಖಾನ್ ಒಡೆತನದ ಹಾಗೂ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ 3ನೇ ಬಾರಿ ಐಪಿಎಲ್ ಟಿ-20 ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಭಾನುವಾರ ಚೆನ್ನೈನಲ್ಲಿ ನಡೆದ ಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 18.3 ಓವರ್ ಗಳಲ್ಲಿ 113 ರನ್ ಗಳಿಗೆ ಆಲೌಟ್ ಮಾಡಿದ ಕೋಲ್ಕತಾ ನೈಟ್ ರೈಸರ್ಸ್ ತಂಡ 10.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್ ಗಳ ಜಯಭೇರಿ ಬಾರಿಸಿತು.
ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್ ಮಾಡಿದ ಕೆಕೆಆರ್ 2012 ಮತ್ತು 2014ರ ನಂತರ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಲ್ಲದೇ 20 ಕೋಟಿ ರೂ. ಬಹುಮಾನ ಮೊತ್ತವನ್ನು ಜೇಬಿಗಿಳಿಸಿಕೊಂಡಿತು.
ಕೆಕೆಆರ್ ಆರಂಭದಲ್ಲೇ ಸುನೀಲ್ ನರೇನ್ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟ್ ಗೆ ರಹಮತುಲ್ಲಾ ಗುರ್ಬಾಜ್ ಮತ್ತು ವೆಂಕಟೇಶ್ ಅಯ್ಯರ್ 91 ರನ್ ಜೊತೆಯಾಟದಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಗುರ್ಬಾಜ್ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 39 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ ಅಜೇಯ 52 ರನ್ ಬಾರಿಸಿದರು.