ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಮಾರಕ ದಾಳಿ ನಡುವೆಯೂ ನಾಯಕ ಸೇರಿದಂತೆ ಮೂವರು ಆಟಗಾರರು ಅರ್ಧಶತಕಗಳನ್ನು ಸಿಡಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆ ಪೈಪೋಟಿಯ ಮೊತ್ತದ ಸವಾಲೊಡ್ಡುವಲ್ಲಿ ಯಶಸ್ವಿಯಾಗಿದೆ.
ಮುಂಬೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್ ಕಲೆ ಹಾಕಿತು.
ಅದ್ಭುತ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ (3) ವಿಫಲರಾಗಿ ನಿರಾಸೆ ಮೂಡಿಸಿದರು. ನಂತರ ಬಂದ ವಿಲ್ ಜಾಕ್ಸ್ (8) ಕೂಡ ಬೇಗನೇ ನಿರ್ಗಮಿಸಿದ್ದರಿಂದ ತಂಡ ಆಘಾತಕ್ಕೆ ಒಳಗಾಯಿತು.
ಮೂರನೇ ವಿಕೆಟ್ ಗೆ ಜೊತೆಯಾದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಟಿದಾರ್ 82 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಫಾಫ್ ಡು ಪ್ಲೆಸಿಸ್ 40 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 61 ರನ್ ಬಾರಿಸಿದರೆ, ರಜತ್ 26 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ನಿರ್ಗಮಿಸಿದರು.
ಈ ಹಂತದಲ್ಲಿ ಮಾರಕ ದಾಳಿ ನಡೆಸಿದ ಜಸ್ ಪ್ರೀತ್ ಬುಮ್ರಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನುಲುಬು ಮುರಿದರು. ಅಲ್ಲದೇ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು.
ಮತ್ತೊಂದೆಡೆ ಫಿನಿಷರ್ ಪಾತ್ರದಲ್ಲಿ ಮಿಂಚುತ್ತಿರುವ ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ ಅರ್ಧಶತಕ (53) ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ಸಮೀಪ ಕೊಂಡೊಯ್ದರು.