2024ನೇ ಸಾಲಿನ ಐಪಿಎಲ್ ಟಿ-20 ಟೂರ್ನಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ 26.75 ಕೋಟಿ ರೂ. ದಾಖಲೆ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ಅಬುಧಾಬಿಯಲ್ಲಿ ಭಾನುವಾರ ನಡೆದ ಐಪಿಎಲ್ 2025ನೇ ಸಾಲಿನ ಹರಾಜು ಪ್ರಕ್ರಿಯೆಯಲ್ಲಿ ಪ್ರಸ್ತುತ ಭಾರತ ತಂಡದಲ್ಲಿ ಸ್ಥಾನ ಪಡೆಯದೇ ಇದ್ದರೂ ಐಪಿಎಲ್ ಫ್ರಾಂಚೈಸಿಗಳ ಮನ ಗೆಲ್ಲುವಲ್ಲಿ ಶ್ರೇಯಸ್ ಅಯ್ಯರ್ ಯಶಸ್ವಿಯಾಗಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಉಳಿಯಲು ನಿರಾಕರಿಸಿದ್ದ ಶ್ರೇಯಸ್ ಅಯ್ಯರ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಆರಂಭದಲ್ಲಿ ಕೆಕೆಆರ್ ತಂಡ ಉಳಿಸಿಕೊಳ್ಳಲು ಶ್ರಮಿಸಿದರೂ 6 ಕೋಟಿ ದಾಟುತ್ತಿದ್ದಂತೆ ಹಿಂದೆ ಸರಿಯಿತು.
ನಂತರ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ತೀವ್ರ ಪೈಪೋಟಿ ನಡೆದಿದ್ದರಿಂದ ಅಂತಿಮವಾಗಿ ದುಬಾರಿ ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ಕಿಂಗ್ಸ್ ಖರೀದಿಸುವಲ್ಲಿ ಯಶಸ್ವಿಯಾಯಿತು. ಅಯ್ಯರ್ ಮೂಲಧನ 2 ಕೋಟಿ ರೂ. ನಿಗದಿಯಾಗಿತ್ತು.
ಇದಕ್ಕೂ ಮುನ್ನ ಬೌಲರ್ ಅರ್ಷದೀಪ್ ಸಿಂಗ್ ಅರ್ಷದೀಪ್ ಸಿಂಗ್ 15.75 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ಖರೀದಿಸಿದ್ದರೂ ನಂತರ ಪಂಜಾಬ್ ಕಿಂಗ್ಸ್ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ 18 ಕೋಟಿ ರೂ.ಗೆ ತಂಡದಲ್ಲಿ ಉಳಿಸಿಕೊಂಡಿತು.
2 ಕೋಟಿ ರೂ. ಮೂಲಧನ ನಿಗದಿಯಾಗಿದ್ದ ಅರ್ಷದೀಪ್ 18 ಕೋಟಿ ರೂ.ಗೆ ಪಂಜಾಬ್ ತಂಡದಲ್ಲೇ ಉಳಿದುಕೊಂಡರು. ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಡಾ 2 ಕೋಟಿ ಮೂಲಧ ನಿಗದಿಯಾಗಿದ್ದರೂ 10.75 ಕೋಟಿಗೆ ಗುಜರಾತ್ ಟೈಟಾನ್ಸ್ ತಂಡದ ಪಾಲಾದರು.