ಮಧ್ಯಮ ವೇಗಿ ಜೇಮ್ಸ್ ಆಂಡರ್ಸನ್ ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ 114 ರನ್ ಗಳಿಂದ ಇಂಗ್ಲೆಂಡ್ ತಂಡ ಜಯ ಸಾಧಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಸರಿದಿದ್ದಾರೆ.
41 ವರ್ಷದ ಜೇಮ್ಸ್ ಆಂಡರ್ಸನ್ ಶುಕ್ರವಾರ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯ ಆಡಿದರು. ಈ ಮೂಲಕ 21 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು.
2003ರಲ್ಲಿ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಮೊದಲ ಪಂದ್ಯ ಆಡುವ ಮೂಲಕ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದ ಆಂಡರ್ಸನ್ ಇದೇ ಮೈದಾನದಲ್ಲಿ ಕೊನೆಯ ಪಂದ್ಯ ಆಡಿದರು.
ವೃತ್ತಿಜೀವನದ ಕೊನೆಯ ಟೆಸ್ಟ್ ಆಡಿದ ಆಂಡರ್ಸನ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದು ಅತ್ಯುತ್ತಮ ಸಾಧನೆಯೊಂದಿಗೆ ಕ್ರಿಕೆಟ್ ಗೆ ಕೊನೆ ಹಾಡಿದರು. ಇದರೊಂದಿಗೆ 40,037 ಎಸೆತದ ದಾಖಲೆಯೊಂದಿಗೆ ಬೌಲಿಂಗ್ ಮಾಡಿದ ದಾಖಲೆ ಬರೆದರು.
ಜೇಮ್ಸ್ ಆಂಡರ್ಸನ್ 188 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 704 ವಿಕೆಟ್ ಪಡೆಯುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ತಮ್ಮದೇ ತಂಡದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ 604 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಜೇಮ್ಸ್ ಆಂಡರ್ಸನ್ 32 ಬಾರಿ 5 ವಿಕೆಟ್ ಗೊಂಚಲು ಪಡೆದು 6ನೇ ಬೌಲರ್ ಎನಿಸಿಕೊಂಡಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (67), ಸರ್ ರಿಚರ್ಡ್ ಹ್ಯಾಡ್ಲಿ (36), ಅನಿಲ್ ಕುಂಬ್ಳೆ (35), ಆರ್. ಅಶ್ವಿನ್ (36), ರಂಗಣ ಹೆರಾಥ್ (34) ಮೊದಲ 5 ಸ್ಥಾನಗಳಲ್ಲಿದ್ದಾರೆ. ಆಂಡರ್ಸನ್ 3 ಬಾರಿ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.
ಆಂಡರ್ಸನ್ ಬೌಲಿಂಗ್ ನಲ್ಲಿ ಅತೀ ಹೆಚ್ಚು ವಿಕೆಟ್ ಕೀಪರ್ 249 ಕ್ಯಾಚ್ ಹಿಡಿದಿದ್ದಾರೆ. 467 ಒಟ್ಟಾರೆ ಕ್ಯಾಚ್ ನೀಡಿ ಔಟಾಗಿರುವ ದಾಖಲೆ ಆಂಡರ್ಸನ್ ಹೆಸರಿನಲ್ಲಿದೆ. ಅಲ್ಲದೇ ಅತೀ ಹೆಚ್ಚು ಬಾರಿ ಬೌಲ್ಡ್ ಮಾಡಿದ ಬೌಲರ್ ಆಗಿ 2ನೇ ಸ್ಥಾನದಲ್ಲಿದ್ದಾರೆ. ಆಂಡರ್ಸನ್ 137 ಬಾರಿ ಬೌಲ್ಡ್ ಮಾಡಿದರೆ, ಮುತ್ತಯ್ಯ ಮುರಳೀಧರನ್ 167 ಬಾರಿ ಬೌಲ್ಡ್ ಮಾಡಿದ ದಾಖಲೆ ಹೊಂದಿದ್ದಾರೆ.