ಯುವ ಆಟಗಾರ್ತಿ ಜಾಸ್ಮಿನ್ ಪೌಲಿನಿ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ತಲುಪುವ ಮೂಲಕ ಈ ಸಾಧನೆ ಮಾಡಿದ ಮೊದಲ ಇಟಲಿಯನ್ ಆಟಗಾರ್ತಿ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಆಲ್ ಇಂಗ್ಲೆಂಡ್ ಕ್ಲಬ್ ಕೋರ್ಟ್ ನಲ್ಲಿ ಗುರುವಾರ ನಡೆದ ವನಿತೆಯರ ಸಿಂಗಲ್ಸ್ ಸೆಮಿಫೈನಲ್ ನಲ್ಲಿ ಜಾಸ್ಮಿನ್ ಪೌಲಿನಿ 2-6, 6-4, 7-6 ಸೆಟ್ ಗಳಿಂದ ಡೊನಾ ವೆಕಿಕ್ ಅವರನ್ನು ಮಣಿಸಿದರು.
28 ವರ್ಷದ ಜಾಸ್ಮಿನ್ ಪೌಲಿನಿ ಫೈನಲ್ ನಲ್ಲಿ ವಿಶ್ವದ 4ನೇ ಶ್ರೇಯಾಂಕಿತೆ ಎಲಿನಾ ರೈಬಕಿನಾ ಮತ್ತು ಮಾಜಿ ಚಾಂಪಿಯನ್ ಬಾರ್ಬರಾ ಕ್ರೆಜಿಕೊವಾ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.
ಸುಮಾರು 2 ಗಂಟೆ 51 ನಿಮಿಷಗಳ ಪಂದ್ಯದಲ್ಲಿ ಜಾಸ್ಮಿನ್ ಪೌಲಿನಿ ಜಯ ಗಳಿಸಿದ್ದು, ಇದು ವಿಂಬಲ್ಡನ್ ಇತಿಹಾಸದಲ್ಲೇ ಅತೀ ದೀರ್ಘ ಅವಧಿಯ ಸೆಮಿಫೈನಲ್ ಪಂದ್ಯವಾಗಿದೆ. ಇದಕ್ಕೂ ಮುನ್ನ ಸೆರೆನಾ ವಿಲಿಯಮ್ಸ್ ಮತ್ತು ಎಲೆನಾ ಡೆಮೆಂಟಿವಾ ನಡುವಣ ಪಂದ್ಯ 2 ಗಂಟೆ 49 ನಿಮಿಷ ನಡೆದಿತ್ತು.