ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಡಬಲ್ ಮಾಡಿಕೊಡುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿ ದಂಪತಿ ಪರಾರಿಯಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ವಂಚನೆಗೆ ಸಹಕರಿಸಿದ ಇಬ್ಬರನ್ನು ಬಂಧಿಸಲಾಗಿದೆ.
ಕಲಬುರಗಿಯ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಯಾಪಿಟಲ್ ಗ್ರೌನ್ ಗ್ರೋತ್ ಪ್ಲಸ್ ಕಂಪನಿ ಹೆಸರಿನಲ್ಲಿ ವಂಚಿಸಿದ ಉತ್ಕರ್ಷ ಮತ್ತು ಸಾವಿತ್ರಿ ದಂಪತಿ ಪರಾರಿಯಾಗಿದ್ದಾರೆ.
ಯುವಕ ಯುವತಿಯರನ್ನೇ ಗುರಿಯಾಗಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿದ್ದ ದಂಪತಿ ಸುಮಾರು 50ಕ್ಕೂ ಹೆಚ್ಚು ಜನರಿಂದ 25 ಲಕ್ಷದಿಂದ ಹಲವು ಲಕ್ಷಗಳವರೆಗೆ ಒಬ್ಬೊಬ್ಬರಿಂದ ಪಡೆದಿದ್ದಾರೆ.
ಸುಮಾರು 30 ಕೋಟಿ ರೂ. ಸಂಗ್ರಹಿಸಿದ ದಂಪತಿ ರಾತ್ರೋರಾತ್ರಿ ಪರಾರಿಯಾಗಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಗೆ ಸಹಕರಿಸಿದ ವಿಜಯ ಸಿಂಗ್ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.